   ಮೂಲದೊಡನಿ ಪರಿಶೀಲಿಸಿ

ಇಂಗ್ಲೆಂಡಿನ ಆರ್ಥಿಕ ಬೆಳವಣಿಗೆ 

ಮಧ್ಯಯುಗದಲ್ಲಿ ಬೇಸಾಯದ ಸ್ಥಿತಿ : ಮಧ್ಯಯುಗದಲ್ಲಿ ಬ್ರಿಟನ್ನಿನ ವ್ಯವಸಾಯ ತೀರ ಹಿಂದುಳಿದಿತ್ತು. ಬೇಸಾಯದ ನೆಲಕ್ಕೆ ಬೇಲಿ ಹಾಕುವ ಕ್ರಮ ಇನ್ನೂ ಬಂದಿರಲಿಲ್ಲ. ಅನಾವೃತ ನೆಲದಲ್ಲಿ ಬೇಸಾಯ ನಡೆಯುತ್ತಿತ್ತು. ಜಾರಿಯಲ್ಲಿದ್ದುದು ತ್ರಿಪ್ರದೇಶ ವ್ಯವಸಾಯ ಕ್ರಮ ವ್ಯವಸಾಯ ಯೋಗ್ಯವಾದ ಜಮೀನನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದ್ದು ಇವುಗಳಲ್ಲಿ ಎರಡು ಭಾಗಗಳಲ್ಲಿ ಮಾತ್ರ ಬೆಳೆ ತೆಗೆಯಲು ಉಪಯೋಗಿಸಿಕೊಂಡು ಮತ್ತೊಂದು ಭಾಗವನ್ನು ಬೀಳುಬಿಡಲಾಗುತ್ತಿತ್ತು. ಪ್ರತಿಯೊಂದು ಭಾಗವನ್ನೂ ಸರದಿಯ ಪ್ರಕಾರ ಬೀಳು ಬಿಡುತ್ತಿದ್ದರು. ಈ ಸದರಿ ಹೀಗೆ ಇರುತ್ತಿತ್ತು.

ವರ್ಷ
ಮೊದಲನೆಯ ಭಾಗದ ಭೂಮಿ ಯಲ್ಲಿನ ಬೆಳೆ
ಎರಡನೆಯ ಭಾಗದ ಭೂಮಿ ಯಲ್ಲಿನ ಬೆಳೆ
ಮೂರನೆಯ ಭಾಗದ ಭೂಮಿ ಯಲ್ಲಿನ ಬೆಳೆ

ಮೊದಲನೆಯ ವರ್ಷ ಎರಡನೆಯ ವರ್ಷ ಮೂರನೆಯ ವರ್ಷ
ಗೋಧಿ
ಬಾರ್ಲಿ
ಬೀಳು
ಬಾರ್ಲಿ
ಬೀಳು
ಗೋಧಿ
ಬೀಳು
ಗೋಧಿ
ಬಾರ್ಲಿ

				 		 
ಈ ಕ್ರಮದಲ್ಲೇ ವ್ಯವಸಾಯ ನಡೆಯುತ್ತಿದ್ದುದರಿಂದ ಉತ್ಪನ್ನ ಬಹಳ ಕಡಿಮೆಯಾಗಿತ್ತು.

	ಮಧ್ಯಯುಗದಲ್ಲಿನ ಹಳ್ಳಿಯ ವ್ಯವಸ್ಥೆ ಮೇನರ್ ಪದ್ಧತಿಯಾಗಿತ್ತು. ಸಾಮಾನ್ಯವಾಗಿ ಒಂದೊಂದು ಮೇನರ್ ಒಂದೊಂದು ಹಳ್ಳಿಯಿಂದ ಕೂಡಿರುತ್ತಿತ್ತು. ಕೆಲವೊಮ್ಮೆ ಅನೇಕ ಹಳ್ಳಿಗಳನ್ನೂ ಅದರ ಸುತ್ತಮುತ್ತಲಿನ ಜಮೀನನ್ನೂ ಒಂದೊಂದು ಮೇನರ್ ಅಥವಾ ಜಹಗೀರು ಆಕ್ರಮಿಸಿಕೊಂಡಿರುತ್ತಿದ್ದುದುಂಟು. ಪ್ರತಿಯೊಂದು ಮೇನರಿಗೂ ಒಬ್ಬ ಪ್ರಭುವಿರುತ್ತಿದ್ದ. ಆ ಮೇನರಿಗೆ ಸೇರಿದ ಎಲ್ಲ ನೆಲಕ್ಕೂ ಆತನೇ ಒಡೆಯ. ಪ್ರತಿಯೊಬ್ಬ ಪ್ರಭುವೂ ತನ್ನ ವಶದಲ್ಲಿ ಸ್ವಲ್ಪ ಜಮೀನನ್ನಿಟ್ಟುಕೊಳ್ಳುತ್ತಿದ್ದ. ಸ್ವಲ್ಪವನ್ನು ಸ್ವತಂತ್ರ ಗೇಣಿದಾರರಿಗೂ ಮತ್ತೆ ಸ್ವಲ್ಪವನ್ನು ಜೀತದಾರರಿಗೂ ಕೊಡುತ್ತಿದ್ದ. ಜೀತದಾರರಿಗೆ ಜಮೀನಿನ ಮೇಲೆ ಯಾವ ರೀತಿಯ ಹಕ್ಕೂ ಇರುತ್ತಿರಲಿಲ್ಲ. ಅವರು ತಮ್ಮ ಧಣಿಗಳಿಗೆ ಅನೇಕ ತೀರಿಯ ಸೇವೆ ಸಲ್ಲಿಸಬೇಕಾಗಿತ್ತು. ಪ್ರತಿ ವಾರದಲ್ಲೂ 2-3 ದಿನ ಅವರು ಮಾಲೀಕರ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ಮಾಲೀಕರಿಗೆ ಸ್ವಲ್ಪ ಹಣ ತರುತ್ತಿದ್ದರು. ಅವರು ಒಂದು ಮೇನರ್ ಬಿಟ್ಟು ಮತ್ತೊಂದಕ್ಕೆ ಹೋಗುವುದು ಸಾಧ್ಯವಿರಲಿಲ್ಲ. ಒಂದು ಪಕ್ಷ ಪಲಾಯನ ಮಾಡಿದರೆ ಅವರನ್ನು ಪತ್ತೆ ಮಾಡಿ ತರಿಸಿ ಶಿಕ್ಷಿಸಲಾಗುತ್ತಿತ್ತು. ಒಟ್ಟಿನಲ್ಲಿ ಊಳಿಗ ವರ್ಗದ ಜನರ ಪರಿಸ್ಥಿತಿ ಶೋಚನೀಯವೆಂದೇ ಹೇಳಬೇಕು. ಗೇಣಿದಾರರ ಒಕ್ಕಲಿಗರಿಗೆ ಇಂಥ ಪರಿಸ್ಥಿತಿಯಿರಲಿಲ್ಲ. ಅವರಿಗೆ ಹೆಚ್ಚಿನ ಸ್ವಾತಂತ್ರ್ಯವಿರುತ್ತಿತ್ತು. ಅವರು ಒಂದು ಮೇನರಿನಿಂದ ಮತ್ತೊಂದು ಮೇನರಿಗೆ ಯಾವ ತೊಂದರೆಯೂ ಇಲ್ಲದೆ ಹೋಗುತ್ತಿದ್ದರು.

	ಮೇನರ್ ಪದ್ಧತಿಯ ಬೇಸಾಯದಿಂದ ವ್ಯವಸಾಯದಲ್ಲಿ ಪ್ರಗತಿ ಕುಂಠಿತವಾಗಿತ್ತು. ಅನೂಚಾನವಾಗಿ ನಡೆದು ಬಂದ ಪದ್ಧತಿಯಲ್ಲೇ ಬೇಸಾಯ ನಡೆಸುತ್ತಿದ್ದುದರಿಂದ ವ್ಯವಸಾಯ ಕ್ರಮದಲ್ಲಿ ಬದಲಾವಣೆ ಮಾಡುವುದಾಗಲಿ ಹೊಸ ಪ್ರಯೋಗಗಳನ್ನು ನಡೆಸುವುದಾಗಲಿ ಸಾಧ್ಯವೇ ಇರಲಿಲ್ಲ. ಅಲ್ಲದೆ ಭೂಮಿಯನ್ನು ಸಣ್ಣ ಸಣ್ಣ ಭಾಗಗಳಾಗಿ ಒಡೆಯಲಾಗುತ್ತಿತ್ತು. ಇದು ಕ್ಷೇತ್ರಫಲದ ಉಪಯೋಗ ಪಡೆಯುವುದಕ್ಕಾಗಿ ಎಂದು ಹೇಳಲಾಗುತ್ತಿದ್ದರೂ ಇದರ ಪರಿಣಾಮವಾಗಿ ಉತ್ಪನ್ನ ತೀರ ಕಡಿಮೆಯಾಗುತ್ತಿತ್ತು.

	ಮೇನರ್ ಪದ್ಧತಿ ಕ್ರಮ ಕ್ರಮವಾಗಿ ಕೊನೆಗೊಂಡಿತು. 16ನೆಯ ಶತಮಾನದ ವೇಳೆಗೆ ಇದರ ಅಳಿವು ಪೂರ್ಣವಾಯಿತು. ಈ ಪದ್ಧತಿ ಕೊನೆಗೊಳ್ಳಲು ಅನೇಕ ಕಾರಣಗಳಿದ್ದವು. ಮೊದಲನೆಯದಾಗಿ, ಇಂಗ್ಲೆಂಡಿನಲ್ಲಿ ಬೆಳೆಯುತ್ತಿದ್ದ ಜನಸಂಖ್ಯೆಗೆ ಹೆಚ್ಚಿನ ಆಹಾರದ ಅವಶ್ಯಕತೆಯಿತ್ತು. ಈ ಹೆಚ್ಚಿನ ಬೇಡಿಕೆಯನ್ನು ಪೂರೈಸುವುದಕ್ಕೋಸ್ಕರ ಮೇನರಿನ ವಿಸ್ತೀರ್ಣವನ್ನು ವಿಸ್ತಾರಗೊಳಿಸಬೇಕಾಯಿತು. ಹೊಸದಾಗಿ ಬೇಸಾಯ ಮಾಡಲಾಗುತ್ತಿದ್ದ ಈ ಜಮೀನು ಒತ್ತಾಗಿತ್ತು; ಮೇನರಿನ ಜಮೀನಿನಂತೆ ಛಿದ್ರವಾಗಿರಲಿಲ್ಲ. ಹೊಸ ಜಮೀನಿನಲ್ಲಿ ಬೇಲಿ ಹಾಕಿ ಫಸಲು ಬೆಳೆಯಲಾಗುತ್ತಿತ್ತು. ಅಂದರೆ ಮೇನರಿನ ಅನೂಚಾನ ಕ್ರಮದಿಂದ ಒಂದು ಹೆಜ್ಜೆ ಮುಂದೆ ಇಟ್ಟಂತಾಯಿತು. ಎರಡನೆಯದಾಗಿ ಹಣ ವ್ಯವಸ್ಥೆ ಜಾರಿಗೆ ಬಂದದ್ದರಿಂದ ಹಿಂದಿದ್ದ ಮನೋಭಾವವೂ ಬದಲಾಯಿತು. ಉತ್ಪಾದನೆ ಸ್ವಂತ ಅನುಭೋಗಕ್ಕಾಗಿ ಮಾತ್ರವೆಂಬ ದೃಷ್ಟಿ ಹೋಯಿತು. ಸ್ವಂತ ಅಗತ್ಯಗಳ ಪೂರೈಕೆ ಮಾಡಿಕೊಂಡು ಮಾರಾಟಕ್ಕಾಗಿಯೂ ಒದಗುವಂತೆ ಹೆಚ್ಚುಹೆಚ್ಚಾಗಿ ಉತ್ಪನ್ನ ಮಾಡುವ ಪ್ರವೃತ್ತಿ ಆರಂಭವಾಯಿತು. ಇದರಿಂದ ಮೇನರ್ ಪದ್ಧತಿ ಸಡಿಲವಾಗಲಾರಂಭವಾಯಿತು. ಮೇನರಿನ ಕ್ಷೀಣದೆಸೆಗೆ ಮೂರನೆಯ ಮುಖ್ಯ ಕಾರಣವೆಂದರೆ 1348ರಲ್ಲಿ ಇಂಗ್ಲೆಂಡಿನಲ್ಲಿ ಸಂಭವಿಸಿದ ಕರಾಳ ಮೃತ್ಯು. ಇದು ಮೇನರುಗಳಲ್ಲಿದ್ದ ಬೇಸಾಯಗಾರರನ್ನು ಅಧಿಕ ಸಂಖ್ಯೆಯಲ್ಲಿ ಆಹುತಿ ತೆಗೆದುಕೊಂಡಿತು. ಮೇನರ್ ಪದ್ಧತಿಯ ವ್ಯವಸಾಯಕ್ಕೆ ಅವಶ್ಯಕವಾದಷ್ಟು ಮಂದಿ ಒದಗದೆ ಪರಿಸ್ಥಿತಿ ಕಠಿಣವಾಯಿತು.

	ಕೈಗಾರಿಕೆಯ ಸ್ಥಿತಿ : ಇಂಗ್ಲೆಂಡಿನ ಕೈಗಾರಿಕೆಯ ವ್ಯವಸ್ಥೆ ಕ್ರಮಕ್ರಮವಾಗಿ ಅನೇಕ ಘಟ್ಟಗಳನ್ನು ದಾಟಿತು. ಇವುಗಳಲ್ಲಿ ಪ್ರಮುಖವಾದುವೆಂದರೆ 1. ಕುಟುಂಬ ವ್ಯವಸ್ಥೆ, 2. ವೃತ್ತಿಸಂಘ ವ್ಯವಸ್ಥೆ, 3. ಹೊರಗೆಲಸ ಕೊಡುವ ವ್ಯವಸ್ಥೆ, 4. ಕಾರ್ಖಾನೆ ವ್ಯವಸ್ಥೆ.

	ಕುಟುಂಬ ವ್ಯವಸ್ಥೆಯೊಂದಿಗೆ ಕೈಗಾರಿಕೆಯ ಬೀಜಾಂಕುರವಾಯಿತೆನ್ನಬಹುದು. ಈ ಸ್ಥಿತಿಯ ಉತ್ಪಾದನೆಯಲ್ಲಿ ಮಾರುಕಟ್ಟೆಯ ಪ್ರಶ್ನೆ ಇರಲಿಲ್ಲ. ಪ್ರತಿಯೊಂದು ಕುಟುಂಬವೂ ತನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಮಾತ್ರ ಪದಾರ್ಥ ತಯಾರಿಸುತ್ತಿತ್ತು. ಹೊರಗಿನ ಪೇಟೆಗಾಗಿ ಪದಾರ್ಥ ತಯಾರಿಕೆಯ ಕೆಲಸ ನಡೆಯುತ್ತಿರಲಿಲ್ಲ.

	12 ಮತ್ತು 13ನೆಯ ಶತಮಾನದಲ್ಲಿ ಪ್ರಾರಂಭವಾದ ವೃತ್ತಿ ಸಂಘಗಳು ಕೈಗಾರಿಕೆಗೆ ಒಂದು ವಿಶಿಷ್ಟಸ್ಥಾನವನ್ನು ಕಲ್ಪಿಸಿಕೊಟ್ಟವೆಂದು ಹೇಳಬಹುದು. ಇವು ಕೈಗಾರಿಕಾ ರಂಗಕ್ಕೆ ಕೃಷಿ ಹಾಗೂ ವಾಣಿಜ್ಯ ರಂಗಕ್ಕಿಂತ ವಿಭಿನ್ನವಾದ ಆರ್ಥಿಕ ಸ್ಥಾನವನ್ನು ಗಳಿಸಿಕೊಟ್ಟವು. ಸ್ಥಳೀಯ ಮಾರುಕಟ್ಟೆಗಳು ಆರಂಭವಾದುವು. ಮಧ್ಯಯುಗದ ಪೂರ್ವದಲ್ಲಿನ ಮುಖ್ಯ ಕಸುಬು ಕೃಷಿಯಾಗಿತ್ತು. ಒರಟಾದ ಬಟ್ಟೆಗಳನ್ನು ಮತ್ತು ತಮಗೆ ಅಗತ್ಯವಾದ ಸಾಧನಗಳನ್ನು ಕೃಷಿಕರೇ ತಯಾರಿಸಿಕೊಳ್ಳುತ್ತಿದ್ದರು. ಆದರೆ ವೃತ್ತಿಸಂಘಗಳ ಆವಿರ್ಭಾವದಿಂದ ಇಂಥ ವಸ್ತುಗಳ ಉತ್ಪಾದನೆಗೆ ಮೀಸಲಾದ ಜನರ ವರ್ಗವೊಂದು ಪ್ರಾರಂಭವಾಯಿತು.

	ವೃತ್ತಿಸಂಘವೆಂದರೆ ಒಂದು ವಸ್ತುವಿನ ತಯಾರಿಕೆಯಲ್ಲಿ ತೊಡಗಿದ್ದ ಕುಶಲ ಕಾರ್ಮಿಕರ ಸಂಘ. ಇಂಗ್ಲೆಂಡಿನಲ್ಲಿ ನೇಯ್ಗೆಗಾರರಲ್ಲಿ ಪ್ರಥಮವಾಗಿ ಈ ರೀತಿಯ ವೃತ್ತಿಸಂಘ ಪ್ರಾರಂಭವಾಯಿತು. ಅನಂತರ ಎಲ್ಲ ವಸ್ತುಗಳ ಉತ್ಪಾದನೆಗೂ ಇವು ಹರಡಿದುವು. ಇವು ಪ್ರಾರಂಭವಾದಾಗ ಜನಗಳಿಗೆ ವೃತ್ತಿಸಂಘಗಳ ಬಗ್ಗೆ ವಿಶೇಷ ಗೌರವವಿತ್ತು. ಈ ವೃತ್ತಿಸಂಘಗಳು ಕಾರ್ಮಿಕರಿಗೆ ಸಮಾಜದಲ್ಲಿ ಉತ್ತಮ ಸ್ಥಾನವನ್ನು ದೊರಕಿಸಿಕೊಟ್ಟುವು. ವೃತ್ತಿಸಂಘಗಳ ನಿಯಮಬದ್ಧತೆಯಿಂದ ಮೇನರ್ ಪದ್ಧತಿಯಲ್ಲಿ ಬೆಳೆದಿದ್ದ ನೌಕರರಿಗೆ ಶಿಸ್ತು ದೊರಕಿತು. 14ನೆಯ ಶತಮಾನದ ಅನಂತರ ಪಟ್ಟಣಗಳಲ್ಲಿ ವೃತ್ತಿಸಂಘಗಳು ಕೈಗಾರಿಕೆಯ ವ್ಯವಸ್ಥೆಯನ್ನು ಹೆಚ್ಚಿನ ರೀತಿಯಲ್ಲಿ ಸಂಘಟಿಸುವುದಕ್ಕೆ ಪ್ರಾರಂಭಿಸಿದುವು. ಹೀಗೆ ವೃತ್ತಿಸಂಘಗಳು ಪಟ್ಟಣ ವ್ಯವಸ್ಥೆಯ ಅವಿಭಾಜ್ಯ ಅಂಗಗಳಾದುವು. 14ನೆಯ ಶತಮಾನದ ಕೊನೆಯ ವೇಳೆಗೆ ಲಂಡನ್ ಮತ್ತು ಇತರ ಮುಖ್ಯ ಪಟ್ಟಣಗಳಲ್ಲಿ ಇವು ಪ್ರಮುಖವಾಗಿ ಹರಡಿದ್ದುವು.

	ವೃತ್ತಿಸಂಘಗಳ ಮುಖ್ಯ ಗುರಿಯೆಂದರೆ, ವಸ್ತುಗಳ ಉತ್ಪಾದನೆಯಲ್ಲಿ ಒಳ್ಳೆಯ ಕುಶಲತೆಯನ್ನು ಉಳಿಸಿಕೊಳ್ಳುವುದು ಮತ್ತು ವಸ್ತುಗಳ ಬೆಲೆಯನ್ನು ನ್ಯಾಯದರದಲ್ಲಿ ಕಾಪಾಡಿಕೊಳ್ಳುವುದು. ವೃತ್ತಿಸಂಘಗಳು ತಮ್ಮ ಸದಸ್ಯರ ಕಾರ್ಯನಿರ್ವಹಣೆಯ ಪರಿಶೀಲನೆಗಾಗಿ ಮೇಲ್ವಿಚಾರಕರನ್ನು ನೇಮಕ ಮಾಡುತ್ತಿದ್ದುವು. ಮೇಲ್ವಿಚಾರಕರಿಗೆ ಯಾವ ಉತ್ಪಾದನಾ ಸಂಸ್ಥೆಗಾಗಲಿ ಭೇಟಿ ನೀಡುವ ಮತ್ತು ಅದರ ಕೆಲಸಗಳನ್ನು ಪರಿಶೀಲಿಸುವ ಹಕ್ಕಿತ್ತು. ವೃತ್ತಿಸಂಘದ ಎಲ್ಲ ಸದಸ್ಯರ ಸಭೆಗಳು ಪದೇ ಪದೇ ಕೂಡಿ ಮುಖ್ಯವಾದ ವಿಷಯಗಳನ್ನು ಚರ್ಚಿಸುತ್ತಿದ್ದುವು. ಅನೇಕ ವೃತ್ತಿಸಂಘಗಳಲ್ಲಿ ಮಂಡಲಿಗಳಿದ್ದುವು. ಇವು ತಮ್ಮ ಸದಸ್ಯರ ಕಾರ್ಯಚಟುವಟಿಕೆಗಳನ್ನು ನಿಗದಿಮಾಡುತ್ತಿದ್ದುವು. ಇವೇ ಮೇಲ್ವಿಚಾರಕರನ್ನೂ ಚುನಾಯಿಸುತ್ತಿದ್ದುವು.

	ಪ್ರತಿ ವೃತ್ತಿಸಂಘದಲ್ಲೂ ಮೂರು ರೀತಿಯ ಸದಸ್ಯರಿರುತ್ತಿದ್ದರು. ಕಸಬುದಾರ ಧಣಿ, ಕಾರೇಗಾರರು (ಜರ್ನಿಮೆನ್) ಮತ್ತು ಅಭ್ಯಾಸಿಗಳು. ಕಸಬುದಾರ ಧಣಿಗಳು ಸಂಸ್ಥೆಗಳನ್ನು ಅಥವಾ ಸಣ್ಣ ಉದ್ಯಮಗಳನ್ನು ಸ್ವಂತವಾಗಿ ಪ್ರಾರಂಭಿಸಿ ಕಾರೇಗಾರರು ಹಾಗೂ ಅಭ್ಯಾಸಿಗಳೊಂದಿಗೆ ತಾವೂ ಸೇರಿ ವಸ್ತುಗಳನ್ನು ಉತ್ಪಾದಿಸುತ್ತಿದ್ದರು. ಕಾರೇಗಾರರು ತರಬೇತಿ ಪಡೆದ ಕಾರ್ಮಿಕರಾಗಿದ್ದು ಕೂಲಿಯ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಅಭ್ಯಾಸಿಗಳು ಯಾವ ವಿಧವಾದ ಕೂಲಿಯನ್ನೂ ಪಡೆಯದೆ ಕಲಿಕೆಗಾಗಿ ಕೆಲಸ ಮಾಡುತ್ತಿದ್ದರು.
	ಅಂದರೆ ಇವರು ಮೂರು ವರ್ಗದ ಜನರಾಗಿದ್ದರೆಂದಲ್ಲ; ಜೀವನ ಕ್ರಮದ ಮೂರು ಹಂತಗಳಲ್ಲಿದ್ದ ಜನರಾಗಿದ್ದರು. ಕಾರೇಗಾರರಿಗೆ ಸಾಕಷ್ಟು ಬಂಡವಾಳ ಸಿಕ್ಕೊಡನೆ ಅವರು ತಮ್ಮದೇ ಉದ್ಯಮ ಪ್ರಾರಂಭಿಸುತ್ತಿದ್ದು, ಹಾಗೆಯೆ ತಮ್ಮ ತರಬೇತಿ ಮುಗಿದ ತಕ್ಷಣ ಅಭ್ಯಾಸಿಗಳು ಕಾರೇಗಾರರಾಗುತ್ತಿದ್ದರು.

	15 ಮತ್ತು 16ನೆಯ ಶತಮಾನಗಳ ಅವಧಿಯಲ್ಲಿ ವೃತ್ತಿ ಸಂಘಗಳು ಕ್ಷೀಣವಾಗಲು ಪ್ರಾರಂಭಿಸಿದುವು. ಕೈಗಾರಿಕೆಯಲ್ಲಿ ಪ್ರಗತಿಯಾದಂತೆಲ್ಲ ಹೆಚ್ಚಿನ ಜನ ವೃತ್ತಿಸಂಘಗಳ ಸದಸ್ಯತ್ವಕ್ಕಾಗಿ ತೀವ್ರವಾದ ನಿಬಂಧನೆ ವಿಧಿಸಲಾರಂಭಿಸಿದುವು. ಆಂತರಿಕವಾಗಿ ವೃತ್ತಿಸಂಘಗಳ ಆಡಳಿತ ವ್ಯವಸ್ಥೆ ಸಡಿಲವಾಗಲಾರಂಭಿಸಿತು. ಕೇವಲ ಕೆಲವು ಜನ ವೃತ್ತಿಸಂಘಗಳಲ್ಲಿ ತಮ್ಮ ಹಿತ ಸಾಧಿಸುವುದಕ್ಕೆ ಪ್ರಾರಂಭಮಾಡಿದರು. ಕೆಲವು ವೃತ್ತಿಸಂಘಗಳು ಸದಸ್ಯತ್ವ ಶುಲ್ಕವನ್ನು ತೀರ ಹೆಚ್ಚಿನ ಮಟ್ಟದಲ್ಲಿಟ್ಟು ಸದಸ್ಯತ್ವವೇ ಅಸಾಧ್ಯವಾಗುವಂತೆ ಮಾಡಲಾರಂಭಿಸಿದುವು. ಮೂಲಸಂಖ್ಯೆ ಹೆಚ್ಚಾಗದಂತೆ ನೋಡಿಕೊಳ್ಳಲು ಕಾರೇಗಾರರು ಮಾಲೀಕರಾಗುವುದನ್ನು ತಡೆಯುವ ನಿಬಂಧನೆಗಳನ್ನು ಮಾಡಲಾಯಿತು. ತಾವೇ ಮಾಲೀಕರಾಗುವುದು ಅಸಾಧ್ಯವೆಂಬುದನ್ನು ಮನಗಂಡ ಕಾರೇಗಾರರು ಹೆಚ್ಚಿನ ಕೂಲಿ ಬೇಡಲಾರಂಭಿಸಿದರು ಮತ್ತು ಮಾಲೀಕರನ್ನು ತಮಗಿಂತ ಹೆಚ್ಚಿನ ಮಟ್ಟದ ಜನ ಎಂಬ ಭಾವನೆಯಿಂದ ನೋಡಲಾರಂಭಿಸಿದರು. ಅಸೂಯೆ ಹುಟ್ಟಿತು. ಅನೇಕ ಪಟ್ಟಣಗಳಲ್ಲಿ ಕಾರೇಗಾರರು ತಮ್ಮದೇ ಆದ ಸಂಘಗಳನ್ನು ಕಾರೇಗಾರರ ವೃತ್ತಿಸಂಘ ಎಂಬ ಹೆಸರಿನಿಂದ ಪ್ರಾರಂಭಿಸಿದರು. ವರ್ಗ ಹೋರಾಟ ಅಸ್ತಿತ್ವಕ್ಕೆ ಬರಲಾರಂಭಿಸಿತು. ಬಂಡವಾಳಗಾರರು ಉತ್ಪಾದನೆಯ ರಂಗದಲ್ಲಿ ಏಕಸ್ವಾಮ್ಯ ಪಡೆದುಕೊಳ್ಳುವ ಪ್ರಯತ್ನ ಆರಂಭಿಸಿದರು. ಅವರು ವಿಶಿಷ್ಟ ಪೋಷಾಕು ಧರಿಸಲಾರಂಭಿಸಿ ತಾವು ಶ್ರೀಮಂತ ವರ್ಗಕ್ಕೆ ಸೇರಿದವರೆಂಬುದನ್ನು ಪ್ರದರ್ಶಿಸಹತ್ತಿದರು. ಈ ಬೆಳವಣಿಗೆಯಿಂದಾಗಿ ಕೆಲಸಗಾರರ ಹಾಗೂ ಬಂಡವಾಳಗಾರರ ನಡುವಣ ಅಂತರ ಹೆಚ್ಚಿತು. ವೃತ್ತಿಸಂಘದ ಉತ್ಪಾದಕ ಕೇವಲ ಕೂಲಿಗಾರನಾಗುವ ಸಂದರ್ಭ ಬಂತು. ಹೀಗಾಗಿ ವೃತ್ತಿಸಂಘಗಳು ಕ್ಷೀಣಗೊಳ್ಳಲಾರಂಭಿಸಿದವು.

	ವೃತ್ತಿಸಂಘಗಳು ಕ್ಷಯಿಸಿದಂತೆಲ್ಲ ಗೃಹಕೈಗಾರಿಕಾ ವ್ಯವಸ್ಥೆ ಜಾರಿಗೆ ಬರಲಾರಂಭಿಸಿತು. ಈ ವ್ಯವಸ್ಥೆಯ ಮುಖ್ಯ ಅಂಶವೆಂದರೆ ಬಂಡವಾಳಕ್ಕೆ ಇದರಲ್ಲಿ ಹೆಚ್ಚಿನ ಪ್ರಾಶಸ್ತ್ಯ ಸಿಗಲಾರಂಭಿಸಿತು. ಬಂಡವಾಳ ಉಳ್ಳವರು ಉತ್ಪಾದನೋದ್ಯಮಗಳ ಮೇಲೆ ಹೆಚ್ಚಿನ ಹಿಡಿತವನ್ನಿಟ್ಟುಕೊಳ್ಳಲಾರಂಭಿಸಿದರು. ಕೈಗಾರಿಕೆಯ ರಂಗದಲ್ಲಿ ಬಂಡವಾಳಸ್ಥರ ಸ್ಥಾನ ಹಿರಿದಾಗಲು ಮೊದಲಾಯಿತು.

	ಮುಂದಿನ ಘಟ್ಟದಲ್ಲಿ, ಬಂಡವಾಳ ಉಳ್ಳ ಈ ಮಧ್ಯಮವರ್ಗದ ಜನ ಹೆಚ್ಚು ಹೆಚ್ಚು ಜನಗಳನ್ನು ಕೂಲಿಗೆ ನೇಮಿಸಿಕೊಂಡು ತಮ್ಮವೇ ಕಾರ್ಖಾನೆಗಳನ್ನು ಪ್ರಾರಂಭಿಸಿದರು. ಕಾರ್ಖಾನೆ ವ್ಯವಸ್ಥೆ ಜಾರಿಗೆ ಬಂತು. ಕೈಗಾರಿಕಾ ಕ್ರಾಂತಿಯವರೆಗೆ ಮುಖ್ಯವಾಗಿ ಹೊರಗೆಲಸ ಕೊಡುವ ವ್ಯವಸ್ಥೆ ಜಾರಿಯಲ್ಲಿತ್ತು. ಕೈಗಾರಿಕಾ ವ್ಯವಸ್ಥೆ ಪ್ರಾರಂಭವಾದ ಅನಂತರ ಉತ್ಪಾದನೆಗೆ ವಿದ್ಯುತ್ತನ್ನು ಬಳಸಿಕೊಳ್ಳಲಾರಂಭಿಸಿದರು.

	ಬ್ಯಾಂಕುಗಳ ವ್ಯವಸ್ಥೆ : ಮಧ್ಯಯುಗದಲ್ಲಿ ಆಧುನಿಕ ರೀತಿಯ ಬ್ಯಾಂಕು ವ್ಯವಸ್ಥೆ ಇರಲಿಲ್ಲ. ಬಡ್ಡಿಗೆ ಸಾಲ ಕೊಡುವ ವ್ಯವಸ್ಥೆ ನೀತಿಬಾಹಿರ ಹಾಗೂ ಕಾನೂನು ಬಾಹಿರವಾಗಿದ್ದುದರಿಂದ ಆಧುನಿಕ ರೀತಿಯ ಬ್ಯಾಂಕ್ ವ್ಯವಸ್ಥೆ ಸಾಧ್ಯವಿರಲಿಲ್ಲ. (ನೋಡಿ- ಕುಸೀದ-ಪದ್ಧತಿ) ಅಕ್ಕಸಾಲಿಗರ ಬಳಿಯಲ್ಲಿ ಭದ್ರ ಕೋಣೆಗಳೂ ತಿಜೋರಿಗಳೂ ಕೊಂಡೊಯ್ದು ಅಕ್ಕಸಾಲಿಗರಲ್ಲಿ ಇಡುತ್ತಿದ್ದರು. ಇವನ್ನು ಪಡೆದ ಅಕ್ಕಸಾಲಿಗರು ಕೇಳಿದಾಗ ಹಿಂತಿರುಗಿಸುವ ವಾಗ್ದಾನ ಮಾಡುತ್ತಿದ್ದರು. ಈ ಕೆಲಸಕ್ಕಾಗಿ ಅವರು ತಮ್ಮ ಗ್ರಾಹಕರಿಂದ ಶುಲ್ಕ ಪಡೆಯುತ್ತಿದ್ದರು. ಅವರು ನಂಬಿಕೆಗೆ ತಕ್ಕಂತೆ ನಡೆದುಕೊಳ್ಳುವುದು ಹೆಚ್ಚಿದಂತೆಲ್ಲ ಇದನ್ನೂ ಒಂದು ವ್ಯಾಪಾರವಾಗಿ ಮಾಡಿಕೊಂಡರು. ಅವರು ಪಡೆದ ಠೇವಣಿಗೆ ಪ್ರತಿಯಾಗಿ ಕೊಡುತ್ತಿದ್ದ ರಸೀತಿಗಳು ಹಣದಂತೆಯೇ ನಂಬಿಕೆಗೆ ಪಾತ್ರವಾಗಿ ಕೈಯಿಂದ ಕೈಗೆ ಸಂಚರಿಸಲು ಪ್ರಾರಂಭಿಸಿದುವು. ಅವರು ತಮ್ಮದೇ ಆದ ಅನೇಕ ಬಗೆಯ ಕಾಗದದ ಹಣವನ್ನು ಆವಿಷ್ಕರಿಸಿದ್ದರು. ಅವುಗಳಲ್ಲಿ ಮುಖ್ಯವಾದುವೆಂದರೆ ಚೆಕ್ಕುಗಳು ಮತ್ತು ಬ್ಯಾಂಕುನೋಟುಗಳು. 		
(ನೋಡಿ- ಅಕ್ಕಸಾಲಿಗರ-ಉದ್ಯಮ)

	ಆದರೆ ಕೆಲವು ಅಕ್ಕ-ಸಾಲಿಗೆ-ಬ್ಯಾಂಕುಗಳ ಆರ್ಥಿಕ ವ್ಯವಹಾರ ಕೆಡಲಾರಂಭಿಸಿತು. 1670ರಲ್ಲಿ ತೀವ್ರವಾದ ಆರ್ಥಿಕ ಬಿಕ್ಕಟ್ಟು ಒದಗಿ ಇಂಥ ಬ್ಯಾಂಕುಗಳ ವಿಷಯದಲ್ಲಿ ಜನರ ನಂಬಿಕೆ ಕಡಿಮೆಯಾಯಿತು. ಜನಗಳು ವ್ಯವಸ್ಥಿತವಾದ ಬ್ಯಾಂಕಿನ ಅವಶ್ಯಕತೆಯ ಬಗ್ಗೆ ಬೇಡಿಕೆ ಸಲ್ಲಿಸಲಾರಂಬಿಸಿದರು. 1688ರ ಕ್ರಾಂತಿಯ ಅನಂತರ 1694ರಲ್ಲಿ ಬ್ಯಾಂಕ್ ಆಫ್ ಇಂಗ್ಲೆಂಡ್ ಅಸ್ತಿತ್ವಕ್ಕೆ ಬಂತು.					 (ನೋಡಿ- ಇಂಗ್ಲೆಂಡಿನ-ಬ್ಯಾಂಕು)

	ಧನ ಪ್ರಧಾನತೆ : 16 ರಿಂದ 18ನೆಯ ಶತಮಾನದ ವರೆಗಿನ ಕಾಲದಲ್ಲಿ ಇಂಗ್ಲೆಂಡಿನಲ್ಲಿ ಮರ್ಕೆಂಟಿಲಿಸಂ ಎಂಬ ಹೆಸರಿನ ಧನಪ್ರಧಾನವ್ಯವಸ್ಥೆಯಿತ್ತು. ಈ ವ್ಯವಸ್ಥೆ 18ನೆಯ ಶತಮಾನದ ಮಧ್ಯಭಾಗದಿಂದ ಕ್ಷಯಿಸಿದರೂ ಅದರ ಪ್ರಭಾವವನ್ನು ಇಂದಿನ ಪ್ರಪಂಚದ ಆರ್ಥಿಕ ವ್ಯವಸ್ಥೆಯಿಂದಲೂ ಕಡೆಗಣಿಸುವಂತಿಲ್ಲ. ಮಧ್ಯಯುಗದಲ್ಲಿ ಇಂಗ್ಲೆಂಡಿನ ಜನರ ಆಕಾಂಕ್ಷೆ ಪ್ರಾದೇಶಿಕ ಸ್ವಾವಲಂಬನವಾಗಿತ್ತು. ಪ್ರತಿಯೊಬ್ಬನೂ ಸ್ವಾವಲಂಬಿಯಾಗುವುದನ್ನೇ ಮುಖ್ಯಗುರಿಯಾಗಿಟ್ಟುಕೊಂಡಿರುತ್ತಿದ್ದ. ಆದರೆ ಮಧ್ಯಯುಗದ ಕೊನೆಯ ವೇಳೆಗೆ ಸಾಮಾಜಿಕ ಬದಲಾವಣೆಗಳಾದ್ದರಿಂದ ಆರ್ಥಿಕ ಚಟುವಟಿಕೆ ಪ್ರಾದೇಶಿಕ ಸ್ವಾವಲಂಬನೆಯಿಂದ ರಾಷ್ಟ್ರೀಯ ಸ್ವಾವಲಂಬನೆಯ ಕಡೆಗೆ ಹರಿಯಿತು. ಸರ್ಕಾರ ಇದನ್ನು ಸಾಧಿಸುವುದಕ್ಕೆ ಜನರ ಆರ್ಥಿಕ ಹಾಗೂ ರಾಜಕೀಯ ಚಟುವಟಿಕೆಗಳನ್ನು ನಿಯಂತ್ರಿಸಬೇಕೆಂದು ಭಾವಿಸಿತು.

	ಬಲವಾದ ಹಾಗೂ ಆರ್ಥಿಕವಾಗಿ ಪರಿಪೂರ್ಣವಾದ ರಾಷ್ಟ್ರ ಕಟ್ಟುವುದೇ ಸರ್ಕಾರದ ಗುರಿಯಾಯಿತು. ಇಂಥ ಗುರಿಯಲ್ಲಿ ನಂಬಿಕೆಯಿಟ್ಟುಕೊಂಡಿದ್ದವರು ಈ ಗುರಿಯ ಸಾಧನೆಗಾಗಿ ಅನೇಕ ಯೋಜನೆಗಳನ್ನು ರೂಪಿಸಿದರು. ಪಶುಪಾಲನೆಗಿಂತ ಉಳುವುದಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟರು. ಆಹಾರದಲ್ಲಿ ಸ್ವಾವಲಂಬಿಗಳಾಗುವುದು ಅತ್ಯಂತ ಅಗತ್ಯವೆಂದು ಅವರು ನಂಬಿದ್ದರು. ಗೋಧಿ ಇತ್ಯಾದಿ ಫಸಲು ಬೆಳೆಯುವುದಕ್ಕೆ ನೇರವಾದ ಪ್ರೋತ್ಸಾಹ ಸಿಗುತ್ತಿತ್ತು. ಈ ನಿಯಮಗಳಿಂದಾಗಿ ಆದ ಪರಿಣಾಮವೆಂದರೆ ಈ ಯುಗದಲ್ಲಿ ಇಂಗ್ಲೆಂಡು ಆಹಾರದ ವಿಷಯದಲ್ಲಿ ಹೆಚ್ಚು ಕಡಿಮೆ ಸ್ವಾವಲಂಬಿಯಾಗಿತ್ತು. ಭೂಮಿಯ ಗೇಣಿ ಹೆಚ್ಚಾಯಿತು.

	ಕೈಗಾರಿಕೆಯ ರಂಗದಲ್ಲಿ ರಾಷ್ಟ್ರೀಯ ಮಟ್ಟದ ಕಾರ್ಖಾನೆಗಳಿಗೆ ಉತ್ತೇಜನ ಸಿಗುತ್ತಿತ್ತು. ಔದ್ಯೋಗಿಕ ರಂಗಕ್ಕೆ ಅನೇಕ ರೀತಿಯಲ್ಲಿ ಪ್ರೋತ್ಸಾಹ ಕೊಡಲಾಗುತ್ತಿತ್ತು. ಸಿದ್ಧಪಡಿಸಿದ ವಸ್ತುಗಳ ಆಮದನ್ನು ನಿಷೇಧಿಸಲಾಗುತ್ತಿತ್ತು. ಆದರೆ ಕಚ್ಚಾವಸ್ತುಗಳ ಆಮದನ್ನು ಸ್ವಾಗತಿಸಲಾಗುತ್ತಿತ್ತು. ಉದಾಹರಣೆಗೆ, 18ನೆಯ ಶತಮಾನದ ಪ್ರಾರಂಭದಲ್ಲಿ ರೇಷ್ಮೆ ವಸ್ತುಗಳ ನಿರ್ಯಾತಕ್ಕೆ ಪ್ರೋತ್ಸಾಹ ಧನವನ್ನು ಕೊಡಲಾಗುತ್ತಿತ್ತು. ಉಣ್ಣೆ ಕಾರ್ಖಾನೆಗಳಿಗೆ ಉತ್ತೇಜನ ಕೊಡುವುದಕ್ಕಾಗಿ ಎಲಿಜಬೆತ್ ರಾಣಿ ಕುರಿಗಳ ನಿರ್ಯಾತವನ್ನು ರದ್ದು ಮಾಡಿದಳು. ವಿದೇಶೀ ವಸ್ತುಗಳ ಅನುಭೋಗವನ್ನು ನಿಷೇಧಿಸಲಾಗುತ್ತಿತ್ತು. ಇದು ಯಾವ ಮಟ್ಟ ಮುಟ್ಟಿತೆಂದರೆ ಇಂಗ್ಲೆಂಡಿನವರು ವಿದೇಶೀ ಹ್ಯಾಟುಗಳನ್ನು ಧರಿಸಬಾರದು, ಶವವನ್ನು ಇಂಗ್ಲಿಷ್ ಉಣ್ಣೆಯ ಬಟ್ಟೆಯಿಂದಲೇ ಸುತ್ತಿ ಹೂಳಬೇಕು-ಮುಂತಾದ ಕಟ್ಟುಕಟ್ಟಳೆಗಳು ಜಾರಿಗೆಬಂದುವು.

	ಅಂತರರಾಷ್ಟ್ರೀಯ ವ್ಯಾಪಾರವನ್ನು ಸುಂಕ ನಿರ್ಬಂಧಗಳ ಮೂಲಕ ನಿಯಂತ್ರಿಸಲಾಗುತ್ತಿತ್ತು. ತಮ್ಮ ವಸಾಹತುಗಳಿಂದ ಕಚ್ಚಾ ಮಾಲನ್ನು ಆಮದು ಮಾಡಿಕೊಂಡು, ಇಂಗ್ಲೆಂಡಿನ ಕಾರ್ಖಾನೆಗಳಲ್ಲಿ ಅದನ್ನು ಸಿದ್ಧವಸ್ತುವಾಗಿ ಮಾರ್ಪಡಿಸಿ ರಫ್ತು ಮಾಡಿ ಚಿನ್ನ ಸಂಪಾದಿಸುವುದರಲ್ಲಿ ದೃಢವಾದ ನಂಬಿಕೆಯಿತ್ತು. ವಸಾಹತುಗಳು ಇಂಗ್ಲೆಂಡಿನ ಆರ್ಥಿಕ ಬೆಳವಣಿಗೆಯನ್ನು ಪೋಷಿಸಲು ಮಾತ್ರ ಇವೆ ಎಂಬುದಾಗಿ ಈ ಧನಪ್ರಾಧನ್ಯವಾದಿಗಳ ಭಾವನೆಯಾಗಿತ್ತು. ಇದು ಬಹಳಮಟ್ಟಿಗೆ ವಸಾಹತುಗಳ ಆರ್ಥಿಕ ಪ್ರಗತಿಯನ್ನು ಕುಂಠಿತಗೊಳಿಸಿತೆಂದು ಹೇಳಬಹುದು. ಸಾಧ್ಯವಾದಷ್ಟು ಮಟ್ಟಿಗೆ ರಾಷ್ಟ್ರಕ್ಕೆ ಚಿನ್ನಬೆಳ್ಳಿಯನ್ನು ಸಂಪಾದಿಸಿ ರಾಷ್ಟ್ರವನ್ನು ಬಲಪಡಿಸುವುದೇ ಗುರಿಯಾಗಿದ್ದ ಈ ನೀತಿಯಿಂದ ರಾಷ್ಟ್ರದ ಸೈನಿಕ ಶಕ್ತಿಯನ್ನು ಬಲಪಡಿಸುವುದಕ್ಕೂ ಸಹಾಯವಾಗುವುದೆಂದು ಅವರು ನಂಬಿದ್ದರು. ಇಂಗ್ಲೆಂಡಿಗೆ ಸ್ಪೇನ್, ಪೋರ್ಚುಗಲ್ಲುಗಳಿಗಿದ್ದಂತೆ ಚಿನ್ನಬೆಳ್ಳಿಯ ಗಣಿಗಳಿರಲಿಲ್ಲ. ಆದ್ದರಿಂದ ಇವುಗಳನ್ನು ಶೇಖರಿಸುವುದು ಅಂತರರಾಷ್ಟ್ರೀಯ ವ್ಯಾಪಾರದ ಮೂಲಕ ಮಾತ್ರ ಸಾಧ್ಯವಿತ್ತು. ಚಿನ್ನಬೆಳ್ಳಿಯ ನಿರ್ಯಾತವನ್ನು ನಿಷೇಧಿಸಲಾಗಿತ್ತು. ಅವುಗಳ ಆಮದನ್ನು ಬಳಸಲಾಗುತ್ತಿತ್ತು. ಹಡಗುಗಳು ವಿದೇಶೀ ವ್ಯಾಪಾರಕ್ಕೆ ಅತ್ಯಂತ ಅಗತ್ಯವಾದದಾದ್ದರಿಂದ ಅವುಗಳನ್ನು ವೃದ್ಧಿಪಡಿಸುವುದಕ್ಕೂ ತೀವ್ರವಾಗಿ ಪ್ರೋತ್ಸಾಹ ನೀಡಲಾಗುತ್ತಿತ್ತು.

ಈ ವ್ಯವಸ್ಥೆಯ ಸಿದ್ಧಿ ಬಹಳ ನಿಯಮಿತವಾಗಿತ್ತೆಂದು ಹೇಳಬಹುದು. ಆದರೆ ಎಲ್ಲ ರಾಷ್ಟ್ರಗಳೂ ಇಂಗ್ಲೆಂಡಿನಂತೆಯೇ ತಮ್ಮ ಚಿನ್ನಬೆಳ್ಳಿಯ ಶೇಖರಣೆಯನ್ನು ರಕ್ಷಿಸಿಕೊಳ್ಳುವುದರಲ್ಲಿ ಆಸಕ್ತವಿದ್ದವೇ ಹೊರತು ಅದನ್ನು ಇಂಗ್ಲೆಂಡಿಗೆ ನಿರ್ಯಾತ ಮಾಡುವುದರಲ್ಲಲ್ಲ. ಚಿನ್ನಬೆಳ್ಳಿಗಳ ರಫ್ತಿನಲ್ಲ್ಲಿ ನಿಷೇಧವಿದ್ದರೂ ಪರಸ್ಪರ ರಾಷ್ಟ್ರಗಳಲ್ಲಿ ವ್ಯಾಪಾರ ನಡೆಯಲೇಬೇಕಾದ್ದರಿಂದ ಈ ಲೋಹಗಳು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋಗುವುದು ಅತ್ಯಾವಶ್ಯಕವಾಗಿತ್ತು. ಅಂತೂ ಈ ಧೋರಣೆಯಿಂದ ಇಂಗ್ಲೆಂಡಿಗೆ ಉಪಕಾರವಾಯಿತು. ಅದೆಂದರೆ, ವಿದೇಶೀ ಆಮದಿನ ಸುಂಕನಿರ್ಬಂಧದಿಂದಾಗಿ ಅನೇಕ ಕಾರ್ಖಾನೆಗಳು ತೀವ್ರಗತಿಯಲ್ಲಿ ಪ್ರಗತಿ ಹೊಂದುವುದಕ್ಕೆ ಸಾಧ್ಯವಾಯಿತು. ಹಡಗು ನಿರ್ಮಾಣಕ್ಕೆ ಪ್ರೋತ್ಸಾಹ ಸಿಕ್ಕಿದ್ದರಿಂದ ಅದು ಮತ್ತು ಬಂದರು ವಿಸ್ತರಣೆಯ ಕಾರ್ಯ ಕ್ಷಿಪ್ರಗತಿಯಲ್ಲಿ ನಡೆಯಿತು.

	ಆದರೂ ಹಣಶೇಖರಣೆಗೆ ಹೆಚ್ಚಿನ ಪ್ರಾಧಾನ್ಯವಿತ್ತು. ಆಯಾತಕ್ಕೆ ಕಡಿಮೆ ಪ್ರಾಮುಖ್ಯವೂ ನಿರ್ಯಾತಕ್ಕೆ ಹೆಚ್ಚಿನ ಪ್ರಾಧಾನ್ಯವೂ ಇದ್ದುವು. ಇದರಿಂದ ಸ್ವಾರ್ಥದ ಅಂಶ ಪ್ರಕಟವಾದಂತಾಯಿತು. ಅಂತರರಾಷ್ಟ್ರೀಯ ಸಹಕಾರಕ್ಕೆ ಬೆಲೆ ಕಡಿಮೆಯಾಯಿತು. ಆದರೂ ಈ ತತ್ತ್ವಗಳು ಸುಮಾರು 200 ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಪ್ರಚಲಿತವಿದ್ದುವು.

	ಈ ಧೋರಣೆಗೆ ಸಂಬಂಧಪಟ್ಟಂತೆ ಎರಡು ಮುಖ್ಯ ವಿಷಯಗಳನ್ನು ನಾವು ಬಳಸಬಹುದು. ಮೊದಲನೆಯದಾಗಿ, ಈ ನೀತಿಯಿಂದಾಗಿ ಇಂಗ್ಲೆಂಡ್, ಫ್ರಾನ್ಸ್ ಸ್ಪೇನ್ ಮತ್ತು ಹಾಲೆಂಡುಗಳ ನಡುವೆ ವಾಣಿಜ್ಯ ವಿಷಯಗಳಲ್ಲಿ ಘರ್ಷಣೆ ಆರಂಭವಾಯಿತು. ಇದು ಸುಮಾರು 3 ಶತಮಾನಗಳ ಕಾಲ ಮುಂದುವರಿಯಿತು. ಎರಡನೆಯದಾಗಿ, ಪ್ರಥಮ ಮಹಾಯುದ್ಧದ ಅನಂತರ ಅನೇಕ ರಾಷ್ಟ್ರಗಳಿಗೆ ತತ್ತ್ವಗಳನ್ನು ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಆರ್ಥಿಕ ನೀತಿಯಲ್ಲಿ ಕಾಣಿಸಿಕೊಂಡವು. ಹೆಚ್ಚು ಸ್ವಾವಲಂಬಿಗಳಾಗಬೇಕೆಂಬುದೇ ಇದಕ್ಕೆ ಮುಖ್ಯ ಕಾರಣವಾಯಿತು.

	ಕೈಗಾರಿಕಾ ಕ್ರಾಂತಿ : ಯೂರೋಪಿನಲ್ಲಿ 18 ಮತ್ತು 19ನೆಯ ಶತಮಾನದಲ್ಲಿ ನಡೆದ ಆರ್ಥಿಕ ಬದಲಾವಣೆಗಳನ್ನು ವಿವರಿಸಲು ಉಪಯೋಗಿಸಲಾಗುತ್ತಿರುವ ಪದವೆಂದರೆ ಕೈಗಾರಿಕಾ ಕ್ರಾಂತಿ. ಕ್ರಾಂತಿ ಎಂದ ಮಾತ್ರಕ್ಕೆ ಇಲ್ಲಿ ವಿಪ್ಲವವಾಗಲಿ ದಂಗೆಯಾಗಲಿ ನಡೆದು ಹಿಂಸೆಯ ತಳಹದಿಯ ಮೇಲೆ ಬದಲಾವಣೆಗಳು ಆದುವೆಂದು ಅರ್ಥವಲ್ಲ. ಆದರೆ ಕೈಗಾರಿಕೆಯ ರಂಗದಲ್ಲಿ ನಡೆದ ತೀವ್ರವಾದ ಈ ಬದಲಾವಣೆಗಳು ಅಗಾಧ ಪ್ರಮಾಣದವು. ಅಭೂತಪೂರ್ವವಾದಂಥವು. ಇವು ಒಂದು ಕ್ರಾಂತಿಯಿಂದ ಆಗಬಹುದಾಗಿದ್ದಷ್ಟೇ ಪರಿಣಾಮಗಳನ್ನುಂಟುಮಾಡಿದ್ದರಿಂದ ಇವಕ್ಕೆ ಕೈಗಾರಿಕಾ ಕ್ರಾಂತಿಯೆಂಬ ಹೆಸರು ಬಂದಿದೆ. ಈ ಕ್ರಾಂತಿ ಸುಮಾರು 150 ವರ್ಷಗಳಲ್ಲಿ ನಡೆದ ಬದಲಾವಣೆಗಳಿಗೆ ಸಂಬಂಧಪಟ್ಟದ್ದು. ಹಿಂದೆ ಈ ಕ್ರಾಂತಿಯ ಫಲವಾಗಿ ವಿಶಿಷ್ಟವಾದ ಒಂದು ಆರ್ಥಿಕ ವ್ಯವಸ್ಥೆ ಜಾರಿಗೆ ಬಂತು.

	ಕ್ರಾಂತಿ ಪ್ರಥಮವಾಗಿ ಸಂಭವಿಸಿದ್ದು ಇಂಗ್ಲೆಂಡಿನಲ್ಲಿ. ಇದು 18ನೆಯ ಶತಮಾನದ ಮಧ್ಯಭಾಗದಲ್ಲಿ ಆರಂಭವಾಗಿ ಸುಮಾರು 70 ವರ್ಷಗಳ ಕಾಲ ಮುಂದುವರಿಯಿತು.

	ಕ್ರಾಂತಿಯ ಫಲವಾಗಿ ಇಂಗ್ಲೆಂಡು ಕೃಷಿಪ್ರಧಾನ ರಾಷ್ಟ್ರದಿಂದ ಕೈಗಾರಿಕಾ ಬದಲಾವಣೆ ಹೊಂದಿತು. 1765 ರಿಂದ 1785ರ ವರೆಗೆ ನೇಯ್ಗೆ ಕೈಗಾರಿಕೆಯಲ್ಲಿ ಕ್ರಾಂತಿಕಾರಕ ಅವಿಷ್ಕಾರಗಳಾದುವು. 1767ರಲ್ಲಿ ಹಾರ್ ಗ್ರೇವ್ಸ್ ನೂಲುವ ಜೆನ್ನಿ ಕಂಡು ಹಿಡಿದ. ಇದು ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಎಳೆಗಳನ್ನು ಪ್ರಥಮ ಸಾಧನವಾಗಿತ್ತು. ಅನಂತರ ಇದು 40 ಎಳೆಗಳನ್ನು ಏಕಕಾಲದಲ್ಲಿ ಎತ್ತುತ್ತಿತ್ತು. 1769ರಲ್ಲಿ ಆರ್ಕ್‍ರೈಟ್ ಕಂಡುಹಿಡಿದ ವಾಟರ್ ಫ್ರೇಮ್ ಇನ್ನೊಂದು ಯಂತ್ರದಿಂದ ನೂಲುಬಳಕೆಯಲ್ಲಿ ಒಂದು ಕ್ರಾಂತಿಕಾರಕ ಸಾಧನೆಯೇ ಆಯಿತು. ಇದರಿಂದ ನೇಕಾರ ಲಿನನ್ ಅಥವಾ ಉಣ್ಣೆ ಹಾಸುದಾರವನ್ನು ಆಮದು ಮಾಡಿಕೊಳ್ಳುವುದು ತಪ್ಪಿ ಪೂರ್ಣ ಅರಳೆಯ ಬಟ್ಟೆ ತಯಾರಿಸಲು ಸಾಧ್ಯವಾಯಿತು. 1779ರಲ್ಲಿ ಈ ಎರಡೂ ಯಂತ್ರಗಳನ್ನು ಸಂಯೋಜಿಸಿ ಅತ್ಯಂತ ಉನ್ನತಮಟ್ಟದ ದಾರದ ಎಳೆಗಳನ್ನು ತಯಾರಿಸುವ ಯಂತ್ರವನ್ನು ರೂಪಿಸಿದ ಯಶಸ್ಸು ಕ್ರಾಂಪ್ಟನ್ನನದಾಯಿತು. 1782ರಲ್ಲಿ ಜೇಮ್ಸ್ ವಾಟ್ ಉಗಿಯಂತ್ರವನ್ನು ಸೃಷ್ಟಿಸಿ ಇಡೀ ಉತ್ಪಾದನಾರಂಗದಲ್ಲೇ ಕ್ರಾಂತಿಯನ್ನೆಸಗಿದ. ವಾಟ್ ಯಂತ್ರ ಎಷ್ಟು ಪರಿಷ್ಕøತವಾಗಿತ್ತೆಂದರೆ 1783ರ ವೇಳೆಗೆ ಕಾರ್ನ್‍ವಾಟ್ ಗಣಿಗಳಲ್ಲಿ ವಿನಾ ಎಲ್ಲ ಸ್ಥಳಗಳಲ್ಲೂ ವಾಟ್ ಯಂತ್ರವೇ ಬಳಕೆಯಲ್ಲಿತ್ತು. ಈ ರೀತಿಯ ಆವಿಷ್ಕಾರಗಳು ಒಂದು ಕೈಗಾರಿಕೆಯಿಂದ ಮತ್ತೊಂದು ಕೈಗಾರಿಕೆಗೆ ಈ ಕಾಲದಲ್ಲಿ ವೇಗವಾಗಿ ಹರಡುತ್ತಿದ್ದುವು. ಯಂತ್ರ ಮತ್ತು ಇಂಜಿನ್ನುಗಳ ಬೇಡಿಕೆ ಹೆಚ್ಚಾಗುವುದಕ್ಕೆ ಪ್ರಾರಂಭವಾಗಿ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಗಳ ಪ್ರಗತಿ ವೇಗವಾಗಲಾರಂಭಿಸಿತು. ಇಂಗ್ಲೆಂಡಿಗೆ ಕಲ್ಲಿದ್ದಲು ಮತ್ತು ಕಬ್ಬಿಣದ ಖನಿಜ ಸಂಪತ್ತು ಹೇರಳವಾಗಿರುವುದು ವರಪ್ರಸಾದವೆನ್ನಬಹುದು. ಕೈಗಾರಿಕಾ ಕ್ರಾಂತಿಯ ಸಿದ್ಧಿಯ ರಹಸ್ಯ ಇವೆರಡರಲ್ಲಡಗಿತ್ತೆಂದೇ ಹೇಳಬಹುದು. ಕೈಗಾರಿಕೆಯ ರಂಗದಲ್ಲಾದ ಈ ಬದಲಾವಣೆ ದೇಶದ ಇತರ ಆರ್ಥಿಕ ರಂಗಗಳಿಗೂ ಪಸರಿಸಿತು. ಉತ್ತಮ ಸಾರಿಗೆ, ವಾಣಿಜ್ಯ, ನೌಕೆ ಇವುಗಳ ಅವಶ್ಯಕತೆ ಹೆಚ್ಚಾದುದರಿಂದ ಈ ದಿಕ್ಕಿನಲ್ಲೂ ಈ ಕ್ರಾಂತಿ ಹಬ್ಬಿತು.

	ನಾವು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಕೈಗಾರಿಕಾ ಕ್ರಾಂತಿ ಒಂದು ರಾತ್ರಿಯಲ್ಲಿ ನಡೆದ ಘಟನೆಯಲ್ಲ. ಆದರೆ ಇದಕ್ಕೆ ಇಂಗ್ಲೆಂಡ್ ಪೂರ್ವ ಸಿದ್ಧತೆ ಪಡೆದಿತ್ತು. ಶತಮಾನಗಳಿಂದ ನಡೆದ ಪ್ರಯತ್ನ 1760ರ ಅವಧಿಯಲ್ಲಿ ಫಲಿಸಿತೆಂದು ಹೇಳಬಹುದು. 1760-1830ರ ಅವಧಿಯಲ್ಲಿ ಇಂಗ್ಲೆಂಡು ತಯಾರಿಸಿದ ವಸ್ತುಗಳಿಗೆ ಬೇಡಿಕೆ ಹೆಚ್ಚಿತು. ಉತ್ಪಾದನೆ ಹೆಚ್ಚಿತು. ಜನಸಂಖ್ಯೆ ವೃದ್ಧಿಯಾಯಿತು. ತಮ್ಮ ಉತ್ಪಾದನೆಗೆ ಬೇಡಿಕೆ ಹೆಚ್ಚಿದ್ದರಿಂದ, ಉತ್ಪಾದಕರು ಹೆಚ್ಚು ಹೆಚ್ಚು ಲಾಭ ಪಡೆದು ಅದನ್ನು ಮತ್ತೆ ಉತ್ಪಾದನೆಯಲ್ಲಿ ತೊಡಗಿಸುವುದು ಸಾಧ್ಯವಾಯಿತು.

	ಉತ್ಪಾದನೆಯ ಜೊತೆಗೆ ಜನಸಂಖ್ಯೆಯೂ ಹೆಚ್ಚಿತು. ಮುಖ್ಯವಾದ ಕೈಗಾರಿಕೆಗಳೊಂದಿಗೆ ಹೊಸ ಹೊಸ ಕಾರ್ಖಾನೆಗಳು ಆರಂಭವಾಗಿ ಕೈಗಾರಿಕೆಯ ರಂಗವನ್ನು ಈ ಕಾಲದಲ್ಲಿ ಬಲಪಡಿಸಿದುವು.

	ಉತ್ಪಾದನೆಯ ವೃದ್ಧಿಯಿಂದ ದೇಶದ ವಿದೇಶೀ ವ್ಯಾಪಾರವೂ ಹೆಚ್ಚಿತು. ಇಂಗ್ಲೆಂಡ್ ಹೆಚ್ಚು ಹೆಚ್ಚು ವಸ್ತುಗಳನ್ನು ರಫ್ತು ಮಾಡಲು ಪ್ರಾರಂಭಿಸಿತು.

	ಕೈಗಾರಿಕಾ ಕ್ರಾಂತಿಯ ಮತ್ತೊಂದು ಪರಿಣಾಮವೆಂದರೆ ಜನ ಹಾಗೂ ಬಂಡವಾಳದ ಸ್ಥಾನಪಲ್ಲಟ ಕ್ರಾಂತಿಪೂರ್ವದಲ್ಲಿ, ಕೈಗಾರಿಕೆಗಳು ಮುಖ್ಯವಾಗಿ ಉತ್ತರದ ಮತ್ತು ಮಧ್ಯಭಾಗದ ಆರು ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿದ್ದುವು. ಆದರೆ ಈ ಕ್ರಾಂತಿಯ ಪರಿಣಾಮವಾಗಿ ವಾಯವ್ಯದಲ್ಲಿ ಜನಸಂಖ್ಯೆ ಮತ್ತು ಬಂಡವಾಳ ಕೇಂದ್ರೀಕೃತವಾದುವು. (1918ರ ಅನಂತರ ಕೈಗಾರಿಕೆಗಳು ಮತ್ತೆ ದಕ್ಷಿಣದಲ್ಲಿ ಕೇಂದ್ರೀಕೃತವಾಗುವ ಪ್ರವೃತ್ತಿ ಹೊಂದಿದುವು).

	ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಇಂಗ್ಲೆಂಡು ಕೈಗಾರಿಕಾ ಪ್ರಧಾನವಾದ ರಾಷ್ಟ್ರವಾಯಿತು. 1851ರ ವೇಳೆಗೆ ಒಟ್ಟು ಜನಸಂಖ್ಯೆಯ ಕೇವಲ 17ರಷ್ಟು ಜನ ಮಾತ್ರ ಕೃಷಿಯಲ್ಲಿ ತೊಡಗಿದ್ದರು. 	(ನೋಡಿ- ಕೈಗಾರಿಕಾ-ಕ್ರಾಂತಿ)

	ಕೃಷಿ ಕ್ರಾಂತಿ : ಸುಮಾರು ಇದೇ ಕಾಲದಲ್ಲಿ ಕೃಷಿಯಲ್ಲೂ ಕ್ರಾಂತಿಯಾಗತೊಡಗಿತು. ಈ ಕ್ರಾಂತಿಗೆ ಪೂರ್ವದಲ್ಲಿ ಮೇನರ್ ಪದ್ಧತಿ ಜಾರಿಯಲ್ಲಿತ್ತು. ಬೇಲಿ ಕಟ್ಟದೆ ಕೃಷಿ ನಡೆಸಲಾಗುತ್ತಿತ್ತು. ಒಂದು ಭಾಗವನ್ನು ಬೀಳು ಬಿಡುತ್ತಿದ್ದುದರಿಂದ ಮತ್ತು ಭೂಮಿಯನ್ನು ಸಣ್ಣ ಸಣ್ಣ ಭಾಗಗಳನ್ನಾಗಿ ಮಾಡಿ ಬೆಳೆ ತೆಗೆಯುತ್ತಿದ್ದರಿಂದ ಉತ್ಪಾದನೆ ಬಹಳ ಕಡಿಮೆಯಿತ್ತು. 16ನೆಯ ಶತಮಾನದಲ್ಲಿ ನೆಲಕ್ಕೆ ಬೇಲಿ ಹಾಕುವ ಚಳವಳಿ (ಆವರಣ ಚಳವಳಿ) ಆರಂಭವಾಯಿತು. ಜಮೀನ್ದಾರರು ಕ್ರಮಕ್ರಮವಾಗಿ ಬೀಳು ಭೂಮಿಯನ್ನು ಆಕ್ರಮಿಸಿಕೊಂಡು ಬೇಲಿ ಕಟ್ಟಿ ಅದನ್ನು ದನಕರುಗಳೂ ಕುರಿಗಳೂ ಮೇಯಲು ಅನುಕೂಲವಾಗುವ ಹುಲ್ಲುಗಾವಲನ್ನಾಗಿ ಮಾಡುತ್ತಿದ್ದರು. ಈ ಆವರಣ ಕಾರ್ಯದಲ್ಲಿ ಜಮೀನ್ದಾರರಿಗೆ ಕಾಯಿದೆಯ ಬೆಂಬಲವೂ ಸಿಕ್ಕಿತು.

	18ನೆಯ ಶತಮಾನದ ಮಧ್ಯಭಾಗದಲ್ಲೂ ಅನಾವೃತ ನೆಲದ ಬೇಸಾಯ ಪದ್ಧತಿ ಇಂಗ್ಲೆಂಡಿನ ಸುಮಾರು ಅರ್ಧ ಭಾಗದಲ್ಲಿ ಜಾರಿಯಲ್ಲಿತ್ತು. ಕೃಷಿಪದ್ಧತಿ ಇನ್ನೂ ಆಧುನಿಕವಾಗಿರಲಿಲ್ಲ. 18ನೆಯ ಶತಮಾನದಲ್ಲಿ ಜನಸಂಖ್ಯೆ ವೇಗವಾಗಿ ಬೆಳೆಯಲಾರಂಭಿಸುದುದರಿಂದ ಆಹಾರಕ್ಕೆ ಬೇಡಿಕೆ ಹೆಚ್ಚಿತು.

	ಈ ರೀತಿಯ ಜಮೀನು ಆವರಣಕ್ಕೆ ಎರಡು ಮುಖ್ಯ ಕಾರಣಗಳಿದ್ದುವು. ಒಂದು, ಹೆಚ್ಚುತ್ತಿದ್ದ ಜನಸಂಖ್ಯೆಗೆ ಹೆಚ್ಚಿನ ಆಹಾರದ ಅಗತ್ಯ; ಎರಡು, ಆರ್ಥಿಕ ಪ್ರಗತಿಯಿಂದ ಶ್ರೀಮಂತರಾಗುತ್ತಿದ್ದ ವಣಿಕ ವರ್ಗಕ್ಕೆ ತಮ್ಮ ಹಣವನ್ನು ಹೂಡಲು ಜಮೀನು ತಕ್ಕದೆಂದು ಕಾಣಿಸಿದ್ದು. ಇದರಿಂದ ಈ ವರ್ಗದವರು ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಬಲಿಷ್ಠರೆಂದು ಹೇಳಿಕೊಳ್ಳಬಹುದಿತ್ತು. ಇವರು ಹೆಚ್ಚು ಹೆಚ್ಚು ಭೂಮಿಯನ್ನು ಕೊಂಡು ಅದನ್ನು ಸುತ್ತುಗಟ್ಟಿ ಬೇಲಿ ಹಾಕಿ ಆಧುನಿಕ ರೀತಿಯಲ್ಲಿ ಬೇಸಾಯ ಮಾಡಿಸುವುದಕ್ಕೆ ಪ್ರಾರಂಭಿಸಿದರು.

	ಈ ರೀತಿಯ ಬೇಸಾಯ ಕ್ರಮದಿಂದ ನಷ್ಟಕ್ಕೆ ಗುರಿಯಾದವರೆಂದರೆ ಸಣ್ಣ ಸಣ್ಣ ರೈತರು. ಅವರಿಂದ ಜಮೀನನ್ನು ಶ್ರೀಮಂತ ಜಮೀನ್ದಾರರು ಕೊಳ್ಳುತ್ತಿದ್ದುದರಿಂದ ಅವರು ಅನೇಕ ವೇಳೆ ಜಮೀನನ್ನು ಕಳೆದುಕೊಂಡು ಊರು ಬಿಡಬೇಕಾದ ಪರಿಸ್ಥಿತಿಯಲ್ಲಿರುತ್ತಿದ್ದರು. ಸಣ್ಣ ರೈತರಿಗೆ ಜಮೀನು ಮಾರಲು ಇಷ್ಟವಿಲ್ಲದಿದ್ದರೂ ತಮ್ಮ ಸಣ್ಣ ಬಂಡವಾಳದೊಂದಿಗೆ ಬೇಲಿ ಹಾಕಿ ಪಕ್ಕದಲ್ಲೆ ಉತ್ತಮ ರೀತಿಯಲ್ಲಿ ಬೇಸಾಯ ನಡೆಸುತ್ತಿದ್ದ ಜಮೀನ್ದಾರರೊಡನೆ ಸ್ಪರ್ಧಿಸುವುದಕ್ಕಾಗುತ್ತಿರಲಿಲ್ಲ. ಹೀಗಾಗಿ ಅವರು ಜಮೀನನ್ನು ತಾವಾಗಿಯೇ ಮಾರಬೇಕಾದ ಪರಿಸ್ಥಿತಿ ಬರುತ್ತಿತ್ತು. ಈ ವರ್ಗ ಕ್ರಮಕ್ರಮವಾಗಿ ಮಾಯವಾಗುತ್ತಿದ್ದದ್ದು ಇಂಗ್ಲೆಂಡಿನ ಸಾಮಾಜಿಕ ಜೀವನಕ್ಕೆ ಒದಗಿದ ದೊಡ್ಡ ನಷ್ಟವೆಂದು ಹೇಳಲಾಗಿದೆ. ಬೇಲಿ ಹಾಕಿ ದೊಡ್ಡ ಪ್ರಮಾಣದಲ್ಲಿ ಬೇಸಾಯ ಮಾಡುವ ಪದ್ಧತಿ ಬಂಡವಾಳಪ್ರಧಾನವಾದ ಬೇಸಾಯ ಕ್ರಮಕ್ಕೆ ನಾಂದಿ ಹಾಡಿತೆಂದು ಹೇಳಬಹುದು.

	ಭೂಮಿಯ ಉತ್ಪಾದನೆಯನ್ನು ಹೆಚ್ಚಿಸಲು ಉತ್ತಮ ರೀತಿಯ ಬೇಸಾಯವೂ ಅಗತ್ಯವಾಯಿತು. ಹಿಂದೆ ಭೂಮಿಯನ್ನು ಹೆಚ್ಚು ಫಲವತ್ತುಗೊಳಿಸಲು ತ್ರಿಪ್ರದೇಶ ವ್ಯವಸಾಯ ಪದ್ಧತಿಯನ್ನು ಅನುಸರಿಸಲಾಗುತ್ತಿತ್ತು: ಒಂದು ಭಾಗದ ಭೂಮಿಯನ್ನು ಬೀಳು ಬಿಡುವುದು, ಸರದಿಯ ಪ್ರಕಾರ ಒಂದೊಂದು ಬೆಳೆಯನ್ನು ತೆಗೆಯುವುದು ಮತ್ತು ಪ್ರಾಣಿಗಳ ಗೊಬ್ಬರವನ್ನು ಉಪಯೋಗಿಸುವುದು. ಆದರೆ ಜಮೀನನ್ನು ವಿಸ್ತಾರಗೊಳಿಸಿ ಕೃಷಿ ಮಾಡಲಾರಂಭಿಸಿದ ಮೇಲೆ ಈ ಮಾರ್ಗಗಳು ಅಷ್ಟೇನೂ ಫಲಪ್ರದವಾದುವೆಂದು ಅನ್ನಿಸಲಿಲ್ಲ. ಅದಕ್ಕೆ ಬದಲಾಗಿ ವೈe್ಞÁನಿಕ ಬೇಸಾಯಕ್ಕೆ ಗಮನಕೊಡಲಾಯಿತು. ಈ ಎಲ್ಲ ಸಂಶೋಧನೆಗಳಿಂದ ಕೃಷಿಯ ಪ್ರಗತಿಗೆ ಬಹಳ ಸಹಾಯವಾಯಿತು.

	ಕೈಗಾರಿಕಾ ಕ್ರಾಂತಿಯಂತೆಯೇ ಕೃಷಿ ಸಹ ಹಂತಹಂತವಾಗಿ ನಡೆದ ಬದಲಾವಣೆ. ಕೃಷಿಗೂ ವಿe್ಞÁನವನ್ನು ಅಳವಡಿಸುವ ಪ್ರಯತ್ನ ಸಫಲವಾಯಿತು. 19ನೆಯ ಶತಮಾನದ ಮಧ್ಯಭಾಗದಲ್ಲಿ ಜರ್ಮನಿಯ ರಸಾಯನಶಾಸ್ತ್ರದ ಸಹಾಯದಿಂದ ಕೃಷಿಗೆ ಆಗಬಹುದಾದ ಲಾಭವನ್ನು ಬೇಸಾಯ ಶಾಸ್ತ್ರಜ್ಞ ಜಸ್ಪಸ್ ವಾನ್ ಲೇಬರ್ಗ್ ತೋರಿಸಿಕೊಟ್ಟ. 
ತತ್‍ಕ್ಷಣವೇ ಇಂಗ್ಲೆಂಡಿನಲ್ಲಿಯೂ ರಾಸಾಯನಿಕ ಗೊಬ್ಬರದ ಉತ್ಪಾದನೆಯನ್ನು ಕೈಗೊಳ್ಳಲಾಯಿತು. ಕೃಷಿಕರು ಸಹಜ ಗೊಬ್ಬರವನ್ನು ಅವಲಂಬಿಸುವುದನ್ನು ಇದು ತಪ್ಪಿಸಿತು.

	ವೈe್ಞÁನಿಕ ಕೃಷಿಸಾಧನಗಳ ಆವಿಷ್ಕಾರ ಉತ್ಪಾದನೆಯನ್ನು ತೀವ್ರವಾಗಿ ವೃದ್ಧಿಪಡಿಸುವುದಕ್ಕೆ ಸಹಾಯ ಮಾಡಿತು. ಕೈಗಾರಿಕೆಯ ರಂಗದಲ್ಲಿ ಸಾಧ್ಯವಾದ ಪ್ರಮಾಣದಲ್ಲಿಯೇ ಕೃಷಿರಂಗದಲ್ಲೂ ಯಂತ್ರಗಳ ಪಾತ್ರ ಹೆಚ್ಚುವುದು ಸಾಧ್ಯವಾಗಲಿಲ್ಲ. ಕೃಷಿಯಲ್ಲಿ ನಿಸರ್ಗದ ಪಾತ್ರ ಹಿರಿದು. ಕೈಗಾರಿಕೆಯ ರಂಗದಲ್ಲಿ ಮಾನವರ ಪಾತ್ರ ಹಿರಿದು. ಕೈಗಾರಿಕೆಯ ರಂಗದಲ್ಲಿ ಕಚ್ಚಾ ಮಾಲಿನ ಪರಿಷ್ಕಾರದಿಂದ ಹಿಡಿದು ಒಂದು ವಸ್ತು ಪೂರ್ಣಗೊಳ್ಳುವವರೆಗೂ ಯಂತ್ರಗಳ ಸಹಾಯದಿಂದಲೇ ಕೆಲಸ ಮಾಡಿಸುವುದು ಸಾಧ್ಯವಿದ್ದುದರಿಂದ ಅಲ್ಲಿ ಯಂತ್ರಗಳ ಆವಿಷ್ಕಾರಕ್ಕೆ ಬಹಳ ಪ್ರಾಧಾನ್ಯವಿತ್ತು. ಅದು ಸಾಧ್ಯವಾಯಿತು. ಕೃಷಿ ರಂಗದಲ್ಲಿ ಅಂಥ ಆವಿಷ್ಕಾರಗಳು ಕೃಷಿಕಾರ್ಯಗಳನ್ನು ಶೀಘ್ರವಾಗಿ ಮಾಡಿ ಮುಗಿಸುವ ಯಂತ್ರಗಳಿಗೆ ಮಾತ್ರ ಸೀಮಿತವಾಗಿತ್ತು.

	1793-1815ರಲ್ಲಿ ಇಂಗ್ಲೆಂಡಿನ ಜಮೀನ್ದಾರರು ಬಹಳ ಉಚ್ಛ್ರಾಯ ಸ್ಥಿತಿಯನ್ನು ಅನುಭವಿಸಿದರು. ಫ್ರಾನ್ಸಿನ ಕ್ರಾಂತಿ, ನೆಪೋಲಿಯನ್ ಯುದ್ಧ ಮುಂತಾದವುಗಳಿಂದಾಗಿ ಇಂಗ್ಲೆಂಡಿನಲ್ಲಿ ಧಾನ್ಯಗಳ ಬೆಲೆ ಏರಹತ್ತಿತು. ಇದರಿಂದಾಗಿ ಹೆಚ್ಚು ಹೆಚ್ಚು ಭೂಮಿಯನ್ನು ಉಳುವುದಕ್ಕೆ ಪ್ರಾರಂಭಿಸಿದರು. 1750-1801ರಲ್ಲಿ ಇಂಗ್ಲೆಂಡಿನ ಪ್ರಜಾಸಂಖ್ಯೆ ದ್ವಿಗುಣವಾದ್ದರಿಂದ ಆಹಾರಧಾನ್ಯಕ್ಕೆ ಬೇಡಿಕೆ ಇನ್ನೂ ಹೆಚ್ಚಿತು. ಇದು ಆವರಣ ಕ್ರಮವನ್ನು ಇನ್ನೂ ವಿಸ್ತಾರಗೊಳಿಸಿತು. 19ನೆಯ ಶತಮಾನದ ಅಂತ್ಯದ ವೇಳೆಗೆ ಸಣ್ಣ ಸಣ್ಣ ರೈತರ ವರ್ಗ ಹೆಚ್ಚು ಕಡಿಮೆ ಮಾಯವಾಗಿತ್ತೆಂದೇ ಹೇಳಬಹುದು. ಧನಿಕ ಜಮೀನ್ದಾರರು ವಿಸ್ತಾರವಾದ ಭೂಮಿಯಲ್ಲಿ ಬೇಸಾಯವನ್ನು ಆಧುನಿಕ ರೀತಿಯಲ್ಲಿ ಮಾಡುತ್ತಿದ್ದರು. ಕೃಷಿ ಆಧುನಿಕಗೊಂಡಿದ್ದರಿಂದ ಕೃಷಿಯ ಮೇಲ ಅವಲಂಬಿತವಾಗಿದ್ದ ಶೇಕಡಾವಾರು ಪ್ರಜಾಸಂಖ್ಯೆ ಇಳಿಮುಖವಾಗುತ್ತ ಬಂತು.

	1815ರಲ್ಲಿ ನೆಪೋಲಿಯನ್ ಯುದ್ಧ ಮುಗಿದಾಗ ಧಾನ್ಯಗಳ ಬೆಲೆಗಳು ಕುಸಿಯಬಹುದೆಂಬ ಶಂಕೆಯಿಂದ ಪಾರ್ಲಿಮೆಂಟು ಧಾನ್ಯಕಾಯಿದೆಯ ಮೂಲಕ ಗೋಧಿ ಮತ್ತು ಇತರ ಧಾನ್ಯಗಳ ಆಮದನ್ನು ನಿಷೇಧಿಸಿತು. 1846ರಲ್ಲಿ ಈ ಕಾಯಿದೆ ಕೊನೆಗೊಂಡಿತು.
	1838ರಲ್ಲಿ ಅಸ್ತಿತ್ವಕ್ಕೆ ಬಂದ ರಾಯಲ್ ಕೃಷಿ ಸಂಸ್ಥೆಯಿಂದ ಕೃಷಿಯ ಪ್ರಗತಿಗೆ ಇಂಗ್ಲೆಂಡಿನಲ್ಲಿ ಬಹಳ ಮಟ್ಟಿಗೆ ಸಹಾಯಕವಾಯಿತು. ಇದು ಕೃಷಿಯ ಹೃದಯ ಹಾಗೂ ಮೆದುಳು ಎಂದು ಪ್ರಸಿದ್ಧವಾಗಿತ್ತು. ಇದು ಕೃಷಿಕರಿಗೆ ಹೊಸ ಹೊಸ ಸಲಹೆಗಳನ್ನು ಕೊಡಲು ಸಮರ್ಥವಾಗಿತ್ತು. ಸರಕಾರವೂ ಕೃಷಿಗೆ ಈ ಅವಧಿಯಲ್ಲಿ ಧಾರಾಳವಾಗಿ ಸಹಾಯ ಮಾಡಿತು.

	1850ರ ಅನಂತರ ಸುಮಾರು ಎರಡು ದಶಕಗಳ ಕಾಲ ಇಂಗ್ಲೆಂಡಿನ ಕೃಷಿ ತನ್ನ ಅತ್ಯಂತ ಪ್ರಗತಿಯ ದಿನಗಳನ್ನು ಕಂಡಿತು. ಕೃಷಿ ಕ್ಷೇತ್ರದಲ್ಲಿ ಇಂಗ್ಲೆಂಡಿನೊಂದಿಗೆ ಪೈಪೋಟಿ ಮಾಡುತ್ತಿದ್ದ ರಾಷ್ಟ್ರಗಳಾದ ಅಮೆರಿಕ, ರಷ್ಯ, ಜರ್ಮನಿ ಮತ್ತು ಇತರ ರಾಷ್ಟ್ರಗಳು. ಈ ಅವಧಿಯಲ್ಲಿ ತಮ್ಮದೇ ಆದ ಸಮಸ್ಯೆಗಳನ್ನು ಎದುರಿಸುತ್ತಿದ್ದುವು. 1860ರಲ್ಲಿ ಅಮೆರಿಕದಲ್ಲಿ ಅಂತರ್ಯುದ್ಧ ಸಂಭವಿಸಿತು. ರಷ್ಯ-ಕ್ರಿಮಿಯನ್ ಯುದ್ಧ ತಲೆ ಎತ್ತುತ್ತಿತ್ತು. ಜರ್ಮನಿ ತನ್ನ ನೆರೆ ರಾಷ್ಟ್ರಗಳ ಮೇಲೆ ಯುದ್ಧ ಹೂಡಿದ ಅನಂತರ ತನ್ನ ಸಂಪತ್ತನ್ನು ರೂಢಿಸಿಕೊಳ್ಳುವುದರಲ್ಲಿತ್ತು. ಹೀಗಾಗಿ, ಗೋಧಿ ಇತ್ಯಾದಿ ಧಾನ್ಯಗಳು ಆ ರಾಷ್ಟ್ರಗಳಿಂದ ಕಡಿಮೆ ಬೆಲೆಗೆ ಇಂಗ್ಲೆಂಡಿಗೆ ಬರುವುದು ಅಸಾಧ್ಯವಾಗಿತ್ತು. ಹೇಗಾಗಿ ಇಂಗ್ಲೆಂಡಿನ ಧಾನ್ಯದ ಬೆಲೆ ಕುಸಿಯಲಿಲ್ಲ. ಬದಲಾಗಿ ಆಸ್ಟ್ರೇಲಿಯ ಮತ್ತು ಕ್ಯಾಲಿಪೋರ್ನಿಯದಿಂದ ಇಂಗ್ಲೆಂಡಿಗೆ ಚಿನ್ನ ಬರುವುದಕ್ಕೆ ಆರಂಭವಾಗಿ ಧಾನ್ಯದ ಬೆಲೆ ಇನ್ನೂ ಹೆಚ್ಚಿತು. ಇಂಗ್ಲೆಂಡಿನ ಕೃಷಿಕರು ಈ ಸುಸಂದರ್ಭವನ್ನು ಉಪಯೋಗಿಸಿಕೊಂಡು ಉತ್ಪಾದನೆ ಹೆಚ್ಚಿಸಿದರು. ಕೃಷಿಗೆ ಯಂತ್ರ ಸಾಧನೆಗಳನ್ನು ಹೆಚ್ಚು ಹೆಚ್ಚಾಗಿ ಅಳವಡಿಸಲಾಯಿತು.

	ಆದರೆ 1874ರ ಅನಂತರ ಕೃಷಿಗೆ ದುರ್ದಿನಗಳು ಬಂದುವು. ಇದಕ್ಕೆ ಅನೇಕ ಕಾರಣಗಳಿದ್ದುವು. ಮಳೆ ಬೀಳದೆ ಹೋದುದರಿಂದ ಬೆಳೆ ಕಡಿಮೆಯಾಯಿತು. 1873-79ರ ನಡುವೆ ಬೆಳೆ ಸ್ವಲ್ಪವೂ ಆಶಾದಾಯಕವಾಗಿರಲಿಲ್ಲ. ವಿದೇಶೀ ಪೈಪೋಟಿ ತೀರ ಹೆಚ್ಚಾಯಿತು. ಉತ್ತರ ಅಮೆರಿಕದವರು ಧಾನ್ಯಗಳನ್ನು ಬೆಳೆಯುತ್ತಿದ್ದ ಆ ದೇಶದವರು ಗೋಧಿಯನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಬೆಳೆದು ಇಂಗ್ಲೆಂಡಿಗೆ ರಫ್ತು ಮಾಡುತ್ತಿದ್ದರು. ಅಮೆರಿಕದ ಕಡಿಮೆ ಬೆಲೆಯ ಗೋಧಿ ಇಂಗ್ಲೆಂಡಿನ ಕೃಷಿಕರನ್ನು ಬಹಳ ಕಷ್ಟಕ್ಕೀಡುಮಾಡಿತು. ಅಮೆರಿಕದಿಂದ ಇಂಗ್ಲೆಂಡಿಗೆ ಗೋಧಿ ಸಾಗಿಸುವ ವೆಚ್ಚವೂ ಈ ಸಮಯದಲ್ಲೇ ಕಡಿಮೆಯಾದ್ದರಿಂದ ಗೋಧಿಯ ಬೆಲೆ ಮತ್ತಷ್ಟು ಇಳಿಯಿತು. ಇದರಿಂದಾಗಿ ಇಂಗ್ಲೆಂಡಿನಲ್ಲಿ ಗೇಣಿ ಅತ್ಯಂತ ಕಡಿಮೆಯಾಯಿತು. ಇಂಗ್ಲೆಂಡಿನ ಕೃಷಿಕರು ಕಡಿಮೆ ಭೂಮಿಯಲ್ಲಿ ಬೆಳೆಯಲಾರಂಭಿಸಿದರು. ಹಳ್ಳಿಯ ಜನಸಂಖ್ಯೆ ಇದರಿಂದ ಕಡಿಮೆಯಾಗುವುದಕ್ಕಾರಂಭವಾಯಿತು. ಇದೇ ಸಮಯದಲ್ಲಿ ಅಮೆರಿಕದಲ್ಲಿ ಗೋಧಿ ಬೆಳೆಯುತ್ತಿದ್ದ ಪ್ರದೇಶ ಹೆಚ್ಚಾಯಿತು. ಇದರ ಪರಿಣಾಮವಾಗಿ ಇಂಗ್ಲೆಂಡಿನಲ್ಲಿ ಧಾನ್ಯದ ಉತ್ಪಾದನೆ ಕಡಿಮೆಯಾಯಿತು. ಇಂಗ್ಲೆಂಡಿನ ಜನ ಹೆಚ್ಚು ಹೆಚ್ಚು ಆಮದು ಆಹಾರದ ಮೇಲೆ ಅವಲಂಬಿತರಾದರು. 1875 ಮತ್ತು 1905ರ ನಡುವೆ ಆಹಾರದ ಆಮದು ಶೇಕಡ 130ರಷ್ಟು ಹೆಚ್ಚಿತು.

	ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಅನೇಕ ಪ್ರಯತ್ನಗಳನ್ನು ಸರ್ಕಾರ ಮಾಡಿತು. ಸಣ್ಣ ಹಿಡುವಳಿ ರಚಿಸಿದರೆ ಉತ್ಪಾದನೆಯಲ್ಲಿ ಪ್ರಗತಿಯಾಗಬಹುದೆಂದು. ಸಣ್ಣ ಹಿಡುವಳಿಗಳಿಗೆ ಪ್ರಾರಂಭದಲ್ಲಿ ಪ್ರೋತ್ಸಾಹ ಕೊಡಲಾಯಿತು. ಇದನ್ನು ಜಾರಿಗೆ ತರಲು ಅನೇಕ ಕಾಯಿದೆಗಳನ್ನು ಜಾರಿಗೆ ತರಲಾಯಿತು. 1907ರ ಸರ್ಣನ ಹಿಡುವಳಿ ಮತ್ತು ಹಂಚಿಕೆ ಕಾಯಿದೆಯಲ್ಲಿ ಭೂಮಿಯನ್ನು ಕೊಂಡು ಅಥವಾ ಬಲಾತ್ಕಾರವಾಗಿ ಗೇಣಿಗೆ ಪಡೆದುಕೊಂಡು ಸಣ್ಣ ಸಣ್ಣ ಹಿಡುವಳಿಗಳನ್ನು ಮಾಡಿ ಸಣ್ಣ ರೈತರಿಗೆ ಗುತ್ತಿಗೆಗೆ ಕೊಡುವುದು ಅಥವಾ ಮಾರುವುದು ಸಾಧ್ಯವಾಯಿತು. ಸಣ್ಣ ರೈತರಿಗೆ ಭೂಮಿಯ ಬೆಲೆಯನ್ನು ಸಣ್ಣ ಸಣ್ಣ ಕಂತುಗಳಲ್ಲಿ ಕಟ್ಟುವ ಅನುಕೂಲ ಕಲ್ಪಿಸಿಕೊಡಲಾಗಿತ್ತು.

	ಸಣ್ಣ ಹಿಡುವಳಿಗಳನ್ನು ನಿರ್ಮಿಸಿದ್ದಲ್ಲದೆ, ಕೃಷಿಗೆ ಅಗತ್ಯವಾದ ಬೇರೆ ಸೌಕರ್ಯಗಳನ್ನೂ ಕಲ್ಪಿಸಿಕೊಡಲಾಗಿತ್ತು. ಸಹಕಾರಕ್ಕೆ ಹಳ್ಳಿಗಳಲ್ಲಿ ಹೆಚ್ಚಿನ ಪ್ರಾಧಾನ್ಯ ಕೊಡಲಾಯಿತು. ಕೃಷಿಗೆ ಸಾಲ, ವೈe್ಞÁನಿಕ ರೀತಿಯ ತರಬೇತಿ ಮತ್ತು ಕೃಷಿಕ ಕಾರ್ಮಿಕ ಸಂಘಗಳನ್ನು ವ್ಯವಸ್ಥೆ ಮಾಡಿ ಕೃಷಿಯನ್ನು ಉತ್ತಮಪಡಿಸುವ ಪ್ರಯತ್ನ ನಡೆಯಿತು.

	ಪ್ರಥಮ ಮಹಾಯುದ್ಧದ ಕಾಲದಲ್ಲಿ ಆಹಾರದ ವಿಷಮ ಪರಿಸ್ಥಿತಿ ನಿವಾರಿಸುವುದಕ್ಕಾಗಿ ಸರ್ಕಾರ ನೇರವಾಗಿ ಕೃಷಿರಂಗವನ್ನು ಪ್ರವೇಶಿಸಿತು. 1917ರ ಧಾನ್ಯ ಉತ್ಪಾದನಾ ಕಾಯಿದೆಯನ್ವಯ ಕೌಂಟಿ ಕೃಷಿಸಮಿತಿಗಳನ್ನು ನೇಮಿಸಿತು. ಈ ಸಮಿತಿಗಳಿಗೆ ಉತ್ಪಾದನೆಯನ್ನು ಹೆಚ್ಚಿಸಲು ಅನೇಕ ಹಕ್ಕುಗಳನ್ನು ಕೊಡಲಾಗಿತ್ತು. ಕೃಷಿಕರು ಹೇಗೆ ತಮ್ಮ ಭೂಮಿಯನ್ನು ಉಪಯೋಗಿಸಬೇಕು ಎಂಬುದನ್ನು ಬಲಾತ್ಕಾರವಾಗಿ ನಿರ್ದೇಶಿಸುವ ಹಕ್ಕು ಈ ಸಮಿತಿಗಳಿಗಿತ್ತು. 1918ರಲ್ಲಿ ಗೋದಿ, ಓಟ್ಸ್ ಮತ್ತು ಆಲೂಗೆಡ್ಡೆಯ ಬೆಳೆ ಸುಮಾರು 59%ರಷ್ಟು ಹೆಚ್ಚಿತು. ಯುದ್ಧ ಕಾಲದಲ್ಲಿ ಹೆಚ್ಚಿಗೆ ಜಮೀನನ್ನು ಕೃಷಿಗೆ ಒಳಪಡಿಸಲಾಯಿತು. ಆದರೆ ಯುದ್ಧ ಮುಗಿದ ತಕ್ಷಣ ಸರ್ಕಾರ ಕೃಷಿರಂಗದಿಂದ ವಾಪಸ್ಸಾಯಿತು.

	1920ರ ಪ್ರಪಂಚದ ಮಹಾ ಆರ್ಥಿಕ ಮುಗ್ಗಟ್ಟಿನ ಕಾಲದಲ್ಲಿ ಇಂಗ್ಲೆಂಡಿನ ಕೃಷಿಕರು ಮತ್ತೆ ದುರ್ದಿನಗಳನ್ನು ಎದುರಿಸಬೇಕಾಯಿತು (ನೋಡಿ- ಪ್ರಪಂಚದ-ಆರ್ಥಿಕ-ಮುಗ್ಗಟ್ಟು). ಕೈಗಾರಿಕೆಯ ಕ್ಷೇತ್ರದಲ್ಲಿ ನಿರುದ್ಯೋಗ ಹೆಚ್ಚಿದುದರಿಂದ ಕೃಷಿವಸ್ತುಗಳ ಬೆಲೆಗಳೂ ಕುಸಿಯಲಾರಂಭಿಸಿದುವು. ಇಂಗ್ಲೆಂಡು ವಿದೇಶಿ ಪೈಪೋಟಿಗೆ ತೀವ್ರವಾಗಿ ತುತ್ತಾಯಿತು. 1932ರಲ್ಲಿ ಗೋಧಿ ಕಾಯಿದೆಯನ್ನು ಜಾರಿಗೆ ತರಲಾಯಿತು. ಇದರ ಪ್ರಕಾರ ಇಂಗ್ಲೆಂಡಿನಲ್ಲಿ ಬೆಳೆದ ಒಂದು ನಿರ್ದಿಷ್ಟ ಪ್ರಮಾಣದ ಗೋಧಿಗೆ ಕನಿಷ್ಠ ಬೆಲೆಯನ್ನು ಖಾತ್ರಿ ಮಾಡಲಾಯಿತು. ಕೃಷಿ ಉತ್ಪಾದನ ಸಾಮಗ್ರಿಗಳನ್ನು ಮಾರುವ ಬೆಲೆಯನ್ನು ನಿಯಂತ್ರಿಸಲು ಅನೇಕ ಮಾರುಕಟ್ಟೆ ಮಂಡಲಿಗಳನ್ನು ರಚಿಸಲಾಯಿತು.

	1931ರ ಮತ್ತು 33ರ ಕೃಷಿ ಉತ್ಪನ್ನ ಮಾರಾಟ ಕಾಯಿದೆಗಳು ಕೃಷಿ ವಸ್ತುಗಳನ್ನು ಸುಲಭವಾಗಿ ಮಾರಲು ಸಹಾಯ ಮಾಡಿದುವು. ಇಂಗ್ಲೆಂಡಿನ ಕೃಷಿ ಉತ್ಪಾದನೆಗೆ ಉಪಕಾರಿಯಾಗುವಂತೆ ಅಂಥ ವಸ್ತುಗಳ ಆಯಾತವನ್ನು ನಿಯಂತ್ರಿಸಲು ವ್ಯಾಪಾರದ ಮಂಡಲಿಗೆ ಅಧಿಕಾರ ನೀಡಲಾಯಿತು. ಈ ಕ್ರಮಗಳಲ್ಲದೆ ಅಂತರರಾಷ್ಟ್ರೀಯ ಒಪ್ಪಂದಗಳ ಮೂಲಕವೂ ಕೃಷಿಯ ಸಮಸ್ಯೆಗಳನ್ನು ಬಗೆಹರಿಸಲು ಯತ್ನಿಸಲಾಯಿತು. 1932ರ ಒಟ್ಟಾವದ ಸಾಮ್ರಾಜ್ಯ ಸಮ್ಮೇಳನದ ಒಪ್ಪಂದಕ್ಕನುಗುಣವಾಗಿ ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡಿನ ಆಹಾರದ ಆಮದನ್ನು ಕಡಿಮೆ ಮಾಡಲಾಯಿತು. ಒಟ್ಟಿನಲ್ಲಿ ಆರ್ಥಿಕ ಕುಸಿತ ಇಂಗ್ಲೆಂಡಿನಲ್ಲಿ ಒಂದು ರಾಷ್ಟ್ರೀಯ ಕೃಷಿ ನಿಯಮವನ್ನು ಜಾರಿಗೆ ತಂದಿತೆಂದು ಹೇಳಬಹುದು. ಕೃಷಿಕರೂ ಸ್ವತಂತ್ರವಾಗಿ ಉತ್ಪಾದನೆವೆಚ್ಚವನ್ನು ಕಡಿಮೆ ಮಾಡುವ ಮತ್ತು ಹೆಚ್ಚು ದೃಢವಾದ ಬೆಳೆಗಳನ್ನು ಬೆಳೆಯುವ ಪ್ರಯತ್ನ ಮಾಡಿದರು.

	ಎರಡನೆಯ ಮಹಾಯುದ್ಧದ ಕಾಲದಲ್ಲಿ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ತೀವ್ರವಾದ ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಈ ಕಲದ ಕೃಷಿನೀತಿಯ ಮುಖ್ಯ ಗುರಿಯೆಂದರೆ ಆಹಾರದಲ್ಲಿ ಸ್ವಾವಲಂಬನೆಯ ಸಾಧನೆ. ಉತ್ಪಾದನೆಯನ್ನು ಹೆಚ್ಚಿಸುವ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಯಿತು. ಹುಲ್ಲುಗಾವಲುಗಳನ್ನು ಧಾನ್ಯ ಬೆಳೆಯುವ ಜಮೀನುಗಳನ್ನಾಗಿ ಪರಿವರ್ತಿಸಲಾಯಿತು. ದೇಶಾದ್ಯಂತ ಯುದ್ಧ ಕೃಷಿ ಸಮಿತಿಗಳನ್ನು ನೇಮಿಸಲಾಯಿತು. ಈ ಸಮಿತಿಗಳು ಕೃಷಿಕರಿಗೆ ಅಗತ್ಯವಾದ ರಾಸಾಯನಿಕ ಗೊಬ್ಬರವನ್ನೂ ಯಂತ್ರಸಾಮಗ್ರಿಗಳನ್ನೂ ಒದಗಿಸುತ್ತಿದ್ದುವು. ಇವು ಭೂಮಾಲೀಕರಿಗೆ ಯಾವ ರೀತಿಯ ಬೆಳೆ ಬೆಳೆಯಬೇಕು ಇತ್ಯಾದಿಗಳ ವಿಷಯದಲ್ಲಿ ನಿರ್ದೇಶನ ಕೊಡುತ್ತಿದ್ದುವು. ಈ ಕ್ರಮಗಳಿಂದ ಉತ್ಪಾದನೆಯಲ್ಲಿ ಹೆಚ್ಚಳ ಸಾಧಿಸುವುದು ಸಾಧ್ಯವಾಯಿತು.

	ಈ ಹೆಚ್ಚಿನ ಉತ್ಪಾದನೆಯ ಸಿದ್ಧಿಗೆ ಸರ್ಕಾರ ತನ್ನ ಕಾಯಿದೆಗಳ ಮೂಲಕ ಸಹಾಯ ಮಾಡಿತು. ಮಾರಾಟ ಸೌಲಭ್ಯಗಳ ಒಪ್ಪಂದದ ಮೂಲಕ ರೈತರಿಗೆ ಖಚಿತ ಬೆಲೆಗಳನ್ನು ಒದಗಿಸಿ ಕೃಷಿಯನ್ನು ಪ್ರೋತ್ಸಾಹಿಸಲಾಯಿತು. ಯುದ್ಧಾನಂತರದಲ್ಲಿ ಸಹ ಈ ಪ್ರೋತ್ಸಾಹಗಳು ಮುಂದುವರಿದುವು.

	ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿ : ಕೈಗಾರಿಕಾಕ್ರಾಂತಿಯ ಫಲವಾಗಿ ಸಾರಿಗೆ ವ್ಯವಸ್ಥೆಯಲ್ಲೂ ಕ್ರಾಂತಿಕಾರಕ ಬದಲಾವಣೆಗಳಾದುವು. ಕೈಗಾರಿಕಾ ಕ್ರಾಂತಿ ಆರಂಭವಾದಾಗ ಇಂಗ್ಲೆಂಡಿನ ಸಾರಿಗೆ ವ್ಯವಸ್ಥೆ ತೀರ ಅಸಮರ್ಪಕವಾಗಿತ್ತು. ಇಂಗ್ಲೆಂಡಿನಲ್ಲಿ ರಸ್ತೆ ವ್ಯವಸ್ಥೆಯ ವಿಷಯದಲ್ಲಿ ನಿರ್ದಿಷ್ಟಯೋಜನೆಗಳಿಲ್ಲದಿದ್ದುದೇ ಈ ಅವ್ಯವಸ್ಥೆಗೆ ಕರಣ. ಸುಂಕದ ರಸ್ತೆ ಕಂಪೆನಿಗಳು ನೂರಾರು ಹುಟ್ಟಿಕೊಂಡಿದ್ದು ಅವೇ ಅಲ್ಲಿಷ್ಟು ರಸ್ತೆ ನಿರ್ಮಿಸಿದ್ದುವು.

	18ನೆಯ ಶತಮಾನದ ಕೊನೆಯಲ್ಲಿ ಮತ್ತು 19ನೆಯ ಶತಮಾನದ ಪ್ರಾರಂಭದಲ್ಲಿ ರಸ್ತೆ ನಿರ್ಮಾಣದಲ್ಲಿ ಅದ್ಭುತ ಪ್ರಗತಿಯಾಯಿತು. ಉತ್ತರ ಇಂಗ್ಲೆಂಡಿನಲ್ಲಿ ಜಾನ್ ಮೆಟ್‍ಕಾಫ್ ಅಚ್ಚುಕಟ್ಟಾದ ಉತ್ತಮ ರಸ್ತೆಗಳನ್ನು ನಿರ್ಮಿಸಿದ. ತೆಲ್ ಫೋರ್ಡ್ ಮತ್ತು ಮ್ಯಕಾಡಂ ಎಂಬುವರು ಒಳ್ಳೆಯ ರಸ್ತೆಗಳನ್ನು ನಿರ್ಮಿಸುವುದಕ್ಕೆ ಆರಂಭಿಸಿದರು. (ಪದರ ಪದರವಾಗಿ ಜಲ್ಲಿ ಹಾಕಿ ಗಟ್ಟಿಸಿ ಮಾಡುವ ಮ್ಯಕಾಡಂ ರಸ್ತೆ ವಿಧಾನಕ್ಕೆ ಇವನ ಹೆಸರೇ ಬಂದಿದೆ.) ಇಂತ ರಸ್ತೆಗಳ ನಿರ್ಮಾಣದಿಂದಾಗಿ ಸಾಗಾಣಿಕೆ ಬೆಲೆ ಕಡಿಮೆಯಾಯಿತು. ಆದರೆ ರೈಲಿನ ಪ್ರಾರಂಭದಿಂದಾಗಿ ರಸ್ತೆ ನಿರ್ಮಾಣಕ್ಕೆ ಮುಂದೆ ಹೆಚ್ಚು ಗಮನ ಕೊಡಲಾಗಲಿಲ್ಲ. ್1ನೆಯ ಶತಮಾನದ ಅಂತ್ಯದ ವೇಳೆಗೆ ಸುಂಕದ ರಸ್ತ ಸಂಸ್ಥೆಗಳೆಲ್ಲ ಮಾಯವಾದುವು.

	ರಸ್ತೆ ನಿರ್ಮಾಣದಲ್ಲಿ ಪ್ರಗತಿಯಾದರೂ ಕೈಗಾರಿಕೆಯ ಪ್ರಗತಿಗೆ ಇಷ್ಟೇ ಸಾಕಾಗಲಿಲ್ಲ. ಅನೇಕ ಕೈಗಾರಿಕೆದಾರರು ಕಾಲುವೆ ಮಾರ್ಗವನ್ನು ಸುಲಭ ಹಾಗೂ ವೇಗ ಸರಕುಸಾಗಾಣಿಕೆಗಾಗಿ ಉಪಯೋಗಿಸಿಕೊಳ್ಳುವ ವಿಚಾರ ಮಾಡಿದರು. ಕಲ್ಲಿದ್ದಲಿಗೆ ಬೇಡಿಕೆ ಹೆಚ್ಚಾದಾಗ ಅದನ್ನು ಸಾಗಿಸಲು ಇದೇ ಸುಲಭ ಉಪಾಯವಾಗಿ ಕಂಡಿತು. 1761ರಲ್ಲಿ ಜೇಮ್ಸ್ ಬ್ರಂಡ್ಲೆ ಎಂಬ ಇಂಜಿನಿಯರ್ ವಾಸ್ರ್ಲೆ ಮತ್ತು ಮ್ಯಾಂಚೆಸ್ಟರ್ ನಡುವೆ ಒಂದು ಕಾಲುವೆ ನಿರ್ಮಿಸಿದ. ಇದಕ್ಕೆ ತಗಲುವ ವೆಚ್ಚವನ್ನು ವಾಸ್ರ್ಲೆಯಲ್ಲಿನ ಗಣಿಯ ಮಾಲಿಕ ಡ್ರೂಕ್ ಬ್ರಿಡ್ಜ್ ವಾಟರ್ ಒದಗಿಸಿದ. ಈ ಸಾಗಾಣಿಕೆ ವ್ಯವಸ್ಥೆಯ ಪರಿಣಾಮವಾಗಿ ಕಲ್ಲಿದ್ದಲಿನ ಬೆಲೆ ಮ್ಯಾಂಚೆಸ್ಟರಿನಲ್ಲಿ ಅರ್ಧಕ್ಕರ್ಧ ಕಡಿಮೆಯಾಯಿತು. ಈ ಸಾಹಸ ಪ್ರವೃತ್ತಿ ಬಂಡವಾಳವಿದ್ದ ಅನೇಕರಿಗೆ ಆಕರ್ಷಕವಾಗಿ ಕಂಡಿತು. 18ನೆಯ ಶತಮಾನದ ಅಂತ್ಯದ ವೇಳೆಗೆ ಸುಮಾರು 3,000 ಮೈಲಿಯಷ್ಟು ಕಾಲುವೆಯಮಾರ್ಗ ನಿರ್ಮಿಸಲಾಯಿತು. ಈ ಕಾಲುವೆಮಾರ್ಗಗಳಿಂದ ಅನೇಕ ಉದ್ಯಮಗಳು ಪ್ರಯೋಜನ ಪಡೆದುಕೊಂದು ಪ್ರಗತಿ ಸಾಧಿಸಿದುವು. ಆದರೆ ಉದ್ಯಮರಂಗದಲ್ಲಿ ಅದ್ಭುತ ಪ್ರಗತಿಯಾಗುತ್ತಿದ್ದುದರಂದ ಉದ್ಬವಿಸಿದ ಸಾಗಾಣಿಕೆಯ ಸಮಸ್ಯೆಯನ್ನು ಬಗೆಹರಿಸಲು ಕಾಲುವೆಮಾರ್ಗಗಳಿಗೆ ಸಾಧ್ಯವಾಗಲಿಲ್ಲ. ಇದಕ್ಕಿಂತ ಹೆಚ್ಚು ವೇಗವಾಗಿ ಸರಕನ್ನು ಸಾಗಿಸಬಲ್ಲ ರೈಲ್ವೆಗಳು ಬಂದು ಕಾಲುವೆಗಳ ಪ್ರಾಮುಖ್ಯವನ್ನು ಕ್ರಮೇಣ ಕುಗ್ಗಿಸಿದುವು.

	ಕೈಗಾರಿಕಾಕ್ರಾಂತಿಯ ಸಫಲತೆಯನ್ನು ಪೋಷಿಸಲು 19ನೆಯ ಶತಮಾನದ ಪ್ರಾರಂಭದಲ್ಲಿ ಅಸ್ತಿತ್ವಕ್ಕೆ ಬಂದ ರೈಲು ಬಹಳ ಮಟ್ಟಿಗೆ ಸಹಾಯಕವಾಯಿತು. 1825ರಲ್ಲಿ ಪ್ರಥಮ ರೈಲು ಮಾರ್ಗ ಪ್ರಾರಂಭವಾಯಿತು. ಇದನ್ನು ಸ್ಟಾಕ್ಷನ್ನಿನಿಂದ ಡಾರ್ಲಿಂಗ್ಟನ್ ವರೆಗೆ ಹಾಕಲಾಗಿತ್ತು. ಈ ಮಾರ್ಗ ಆರ್ಥಿಕವಾಗಿ ಲಾಭದಾಯಕವೆಂದು ಕಂಡುಬಂದದ್ದರಿಂದ ರೈಲುಮಾರ್ಗ ನಿರ್ಮಾಣ ಅಲ್ಲಿಂದ ಮುಂದಕ್ಕೆ ವೇಗವಾಗಿ ನಡೆಯಿತು. ಇಂಗ್ಲೆಂಡಿನ ನಾನಾ ಭಾಗಗಳಲ್ಲಿ ರೈಲು ಮಾರ್ಗಗಳನ್ನು ನಿರ್ಮಿಸಲು ರೈಲ್ವೆ ಕಂಪೆನಿಗಳು ಅಸ್ತಿತ್ವಕ್ಕೆ ಬಂದುವು. 1838ರ ವೇಳೆಗೆ ಸುಮಾರು 500 ಮೈಲಿಗಳಷ್ಟು ರೈಲು ಮಾರ್ಗ ನಿರ್ಮಾಣವಾಗಿತ್ತು. 10 ವರ್ಷದ ಅನಂತರ ರೈಲುಮಾರ್ಗ 5,000 ಮೈಲಿಗಳನ್ನು ಮುಟ್ಟಿತೆಂದರೆ ನಿರ್ಮಾಣದ ವೇಗ ಅರ್ಥವಾಗುತ್ತದೆ. ಆದರೆ ರೈಲ್ವೆ ನಿರ್ಮಾಣದಲ್ಲಿದ್ದ ತೊಂದರೆಯೆಂದರೆ, ರೈಲ್ವ ನಿರ್ಮಾಣಕ್ಕೆ ಪಾರ್ಲಿಮೆಂಟಿನ ಒಪ್ಪಿಗೆ ಪಡೆಯಬೇಕಾಗಿತ್ತು. ರೈಲು ಮಾರ್ಗಗಳನ್ನು ನಿರ್ಮಿಸಲು ಭೂಮಿಯನ್ನು ಆಕ್ರಮಿಸಿಕೊಂಡಾಗ ಅದರ ಮಾಲೀಕರಿಗೆ ಹೆಚ್ಚಿನ ಪರಿಹಾರ ಕೊಡಬೇಕಾಗಿತ್ತು. ಇದೆಲ್ಲ ವೆಚ್ಚದಿಂದಾಗಿ ಇಡೀ ಪ್ರಪಂಚದಲ್ಲೇ ರೈಲ್ವೆ ನಿರ್ಮಾಣದ ವೆಚ್ಚ ಇಂಗ್ಲೆಂಡಿನಲ್ಲಿ ಅತ್ಯಧಿಕವಾಗಿತ್ತು. ಇಂಗ್ಲೆಂಡಿನಲ್ಲಿ ಸರಾಸರಿ ಒಂದು ಮೈಲು ರಸ್ತೆ ನಿರ್ಮಾಣಕ್ಕೆ 56,915 ಪೌಂಡು ವೆಚ್ಚ ತಗಲುತ್ತಿತ್ತೆಂದು ಅಂದಾಜುಮಾಡಲಾಗಿದೆ.

	ಆದರೆ ರೈಲ್ವೆ ಕಂಪೆನಿಗಳಿಂದ ಸಿಗುತ್ತಿದ್ದ ಲಾಭಾಂಶದ ಆಶೆಯಿಂದ 1844ರ ಅನಂತರ ಸಣ್ಣ ಪುಟ್ಟ ಆದಾಯದವರು ರೈಲ್ವೆ ಕಂಪನಿಗಳಲ್ಲಿ ಹಣ ತೊಡಗಿಸಲು ಪ್ರಾರಂಭಿಸಿದರು. ರೈಲ್ವೆಯ ಪ್ರಾಧಾನ್ಯಯುಗ ಈ ಕಾಲದಲ್ಲಿ ಆರಂಭವಾಯಿತು. ಜಾರ್ಜ್ ಹಡ್‍ಸನ್ ಎಂಬುವನು ರೈಲ್ವೆಯಲ್ಲಿ ಹಣ ತೊಡಗಿಸಿದರೆ ಅಧಿಕ ಲಾಭ ಬರುತ್ತದೆ ಎಂಬುದನ್ನು ತೋರಿಸಿದ. 1844ರಲ್ಲಿ 805 ಮೈಲಿ ಹೊಸ ಅನುಮತಿ ದೊರೆಯಿತು. 1844-72ರ ಅವಧಿಯಲ್ಲಿ ಹೊಸ ಹೊಸ ರೈಲು ಮಾರ್ಗ ರಚನೆಗೆ ಹಾಗೂ ಇದ್ದ ರೈಲುಮಾರ್ಗಗಳ ಸಂಯೋಜನೆಗೆ ಕಾಯಿದೆಯ ಬೆಂಬಲ ದೊರೆಯಿತು. 1846ರ ಹೊತ್ತಿಗೆ ಇಂಗ್ಲೆಂಡಿನ ಜನರಿಗೆ ರೈಲ್ವೆ ಹುಚ್ಚು ಹಿಡಿದಿತ್ತು ಎಂದು ಹೇಳಲಾಗಿದೆ.

	ಇಂಗ್ಲೆಂಡಿನ ರೈಲ್ವೆ ಬೆಳವಣಿಗೆಯ ವೈಶಿಷ್ಟ್ಯವೆಂದರೆ ಸಂಪೂರ್ಣವಾಗಿ ಖಾಸಗಿ ಕಂಪೆನಿಗಳು ರೈಲ್ವ್ವೆಯನ್ನು ನಿರ್ಮಿಸಿದ್ದು. 1830-53ರ ಅವಧಿಯಲ್ಲಿ ಸರ್ಕಾರದ 5 ರೈಲ್ವೆ ಸಮಿತಿಗಳು ರೈಲ್ವೆನೀತಿಯನ್ನು ಕುರಿತು ಚರ್ಚಿಸಿದುವಾದರೂ ರೈಲ್ವೆಯನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಬೇಕೆಂದು ಹೇಳುವುದರ ಬಗ್ಗೆ ಅವು ಆಸಕ್ತಿ ತೋರಿಸಿರಲಿಲ್ಲ.

	ಇಂಗ್ಲೆಂಡಿನಲ್ಲಿ ರೈಲ್ವೆ ನಿರ್ಮಾಣ ಖಾಸಗಿ ಕ್ಷೇತ್ರದಲ್ಲಿದ್ದದ್ದರಿಂದ ಇದರ ಬೆಳವಣಿಗೆ ಯೋಜನಾಬದ್ದವಾಗಿರಲಿಲ್ಲ. ಖಾಸಗಿಕ್ಷೇತ್ರದ ರೈಲ್ವೆಏಕಸ್ವಾಮ್ಯಗಳ ಬಗ್ಗೆ ಪ್ರಾರಂಭದಲ್ಲಿ ಅಷ್ಟೇನೂ ಸಮಸ್ಯೆಯಿರಲಿಲ್ಲ. ಕ್ರಮೇಣ ಇವುಗಳ ಕೆಲವು ನ್ಯೂನತೆಗಳು ಬೆಳಕಿಗೆ ಬಂದುವು. ಇವನ್ನು ಅನೇಕರು ಸರ್ಕಾರದ ಗಮನಕ್ಕೆ ತಂದರು. ಈ ಕ್ಷೇತ್ರದಲ್ಲಿ ಸರ್ಕಾರದ ನಿಯಂತ್ರಣವಿರಬೇಕೆಂದು ಒತ್ತಾಯ ಮಾಡಿದರು. ರೈಲ್ವೆ ಸಮಿತಿ ದರಗಳನ್ನು ನಿಗದಿಮಾಡುವಂತೆ 1888ರಲ್ಲಿ ಸರ್ಕಾರ ನಿರ್ದೇಶಿಸಿತ್ತು. ಈ ಸಮಿತಿ ರೈಲ್ವೆ ಕನಿಷ್ಠ ಹಾಗೂ ಗರಿಷ್ಠ ದರಗಳನ್ನು ಗೊತ್ತು ಮಾಡಿತು. 1892ರಲ್ಲಿ ಮತ್ತೆ ಸಮಿತಿ ದರಗಳನ್ನು ಏರಿಸದಂತೆ ನಿರ್ದೇಶಿಸಿತು.

	ಮೊದಲನೆಯ ಮಹಾಯುದ್ಧದ ಕಾಲದಲ್ಲಿ ರೈಲ್ವೆಯನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡಿತು. ಆದರೆ ಇದು ರಾಷ್ಟ್ರದ ಹಿತದೃಷ್ಟಿಯಿಂದ ಮಾತ್ರ ರೈಲ್ವೆಯನ್ನು ನಡೆಸಿದಾಗ ಬಂದ ಅನುಭವದಿಂದ ಅದರ ವಿಷಯದಲ್ಲಿ ಸರ್ಕಾರದ ನಿಲುವು ಬದಲಾಯಿತು ರೈಲ್ವೆ ಕಂಪೆನಿಗಳನ್ನು ಸಂಯೋಜಿಸಿದರೆ ಲಾಭ ಉಂಟಾಗುತ್ತದೆಂಬುದನ್ನು ಅದು ಮನಗಂಡಿತು. ಇದರ ಪರಿಣಾಮವೇ 1921ರ ರೈಲ್ವೆ ಕಾನೂನು. ಈ ಕಾನೂನಿಗೆ ಅನುಗುಣವಾಗಿ ಇಂಗ್ಲೆಂಡಿನ 121 ಕಂಪೆನಿಗಳನ್ನು ಸಂಯೋಜಿಸಿ 4 ವಿಭಾಗಗಳಾಗಿ ಮಾಡಲಾಯಿತು.

	ಎರಡನೆಯ ಮಹಾಯುದ್ಧದ ಕಾಲದಲ್ಲಿ ಸರ್ಕಾರ ರೈಲ್ವೆಗಳನ್ನು ಬಲವಾಗಿ ನಿಯಂತ್ರಿಸಿತು. 1947ರಲ್ಲಿ ಸಾರಿಗೆ ಕಾಯಿದೆಯನ್ನು ಜಾರಿಗೆ ತಂದು ಇಂಗ್ಲೆಂಡಿನಲ್ಲಿ ರೈಲ್ವೆಯನ್ನು ರಾಷ್ಟ್ರೀಕರಿಸಲಾಯಿತು. 1956ರಲ್ಲಿ ರೈಲ್ವೆಗಾಗಿ 15 ವರ್ಷ ಅವಧಿಯ ಒಂದು ಯೋಜನೆಯನ್ನು ರೂಪಿಸಲಾಯಿತು.

	ಒಟ್ಟಿನಲ್ಲಿ ರೈಲ್ವೆಪ್ರಗತಿ, ಇಂಗ್ಲೆಂಡಿನ ಆರ್ಥಿಕ ಪ್ರಗತಿಗೆ ಅತ್ಯಂತ ಸಹಾಯಕವಾಯಿತಲ್ಲದೆ ರಾಷ್ಟ್ರದ ಕೈಗಾರಿಕೆ ಬೆಳವಣಿಗೆಗೆ ಬಹಳ ಮಟ್ಟಿಗೆ ಸಹಾಯ ಮಾಡಿತು.

	ಇದೇ ಕಾಲಕ್ಕೆ ಇಂಗ್ಲೆಂಡಿನ ನೌಕಾಸಾರಿಗೆಯ ಬೆಳವಣಿಗಯೂ ಆಗದಿದ್ದಿದ್ದರೆ ಅದರ ಕೈಗಾರಿಕಾ ಕ್ರಾಂತಿ ಬಹಳ ಕುಂಠಿತವಾಗುತ್ತಿತ್ತು. ತನಗೆ ಅಗತ್ಯವಾದ ಆಹಾರ ಧಾನ್ಯಗಳನ್ನು ಮತ್ತು ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಇಂಗ್ಲೆಂಡಿಗೆ ಸಾಗರ ವ್ಯವಸ್ಥೆ ಮೊದಲಿನಿಂದಲೂ ಸಹಾಯಮಾಡಿತು. ಇಂಗ್ಲೆಂಡಿನ ಆರ್ಥಿಕ ಪ್ರಗತಿ ಬಹಳ ಮಟ್ಟಿಗೆ ಈ ಸಾರಿಗೆಯನ್ನೆ ಅವಲಂಬಿಸಿತ್ತು. ಇಂಗ್ಲೆಂಡಿನ ಧನಪ್ರಭುತ್ವವಾದ ಸಿದ್ಧಿಗೆ ಸಹ ಇದು ತೀರ ಅಗತ್ಯವಾಗಿತ್ತು. 1651ದ ಮತ್ತು 1660ರಲ್ಲಿ ನೌಕಾಕಾಯಿದೆಗಳ ಮೂಲಕ ನೌಕಾಸಾರಿಗೆಗೆ ಪ್ರೋತ್ಸಾಹ ಕೊಡಲಾಯಿತು. 19ನೆಯ ಶತಮಾನದ ಪ್ರಾರಂಭವಾದ ಸೂಯೆಜ್ ಕಾಲುವೆ ಇಂಗ್ಲೆಂಡಿನ ವ್ಯಾಪಾರವನ್ನು ಕುದುರಿಸಿ ನೌಕಾನಿರ್ಮಾಣಕ್ಕೆ ಪ್ರೋತ್ಸಾಹ ಕೊಟ್ಟಿತು. 1890ಕ್ಕಿಂತ ಮುಂಚೆ ಪ್ರಪಂಚದ ಒಟ್ಟು ಹಡಗು ನಿರ್ಮಾಣದ 80%ರಷ್ಟನ್ನು ಇದು ನಿರ್ವಹಿಸುತ್ತಿತ್ತೆಂದು ಅಂದಾಜು ಮಾಡಲಾಗಿದೆ. 19ನೆಯ ಶತಮಾನದ ಕೊನೆಯ ಭಾಗದ ಅನಂತರ ಇತರ ರಾಷ್ಟ್ರಗಳೂ ಇಂಗ್ಲೆಂಡಿನೊಡನೆ ಹಡಗು ನಿರ್ಮಾಣದಲ್ಲಿ ತೀವ್ರವಾಗಿ ಸ್ಪರ್ಧಿಸಲಾರಂಭಿಸಿದುವು.

	ಪ್ರಥಮ ಮಹಾಯುದ್ಧದ ಅವಧಿಯಲ್ಲಿ ಇಂಗ್ಲೆಂಡಿನ ನೌಕಾ ವ್ಯವಸ್ಥೆಗೆ ಬಲವಾದ ಪೆಟ್ಟು ಬಿತ್ತು. ಯುದ್ಧಾನಂತರ ಸರ್ಕಾರ ಹೊಸ ನೌಕಾಬಂದರುಗಳನ್ನು ನಿರ್ಮಿಸಿತು. 1920ರ ವೇಳೆಗೆ ಇಂಗ್ಲೆಂಡ್ ಮತ್ತೆ ಚೇತರಿಸಿಕೊಂಡಿತು. 1935ರಲ್ಲಿ ಸರ್ಕಾರ ನೌಕಾಸಂಸ್ಥೆಗಳಿಗೆ ಸಹಾಯಧನ ಹಾಗೂ ಸಾಲವನ್ನು ಕೊಟ್ಟು ಪ್ರೋತ್ಸಾಹಿಸಿತು.

	ಎರಡನೆಯ ಮಹಾಯುದ್ಧ ಕಾಲದಲ್ಲೂ ಇಂಗ್ಲೆಂಡಿನ ನೌಕಾಸಾರಿಗೆಗೆ ಬಹಳ ಪೆಟ್ಟು ಬಿತ್ತು. ವಿಶ್ವದ ಒಟ್ಟು ನೌಕಾ ಸಾರಿಗೆಯಲ್ಲಿ ಬ್ರಿಟನ್ನಿನ ಪಾಲು 1937-47ರ ದಶಕದಲ್ಲಿ 31.8% ರಿಂದ 24.6%ಕ್ಕೆ ಇಳಿಯಿತು. ಆದರೆ ಹಡಗು ನಿರ್ಮಾಣದಲ್ಲಿ ಜಪಾನ್, ಅಮೆರಿಕ ಮತ್ತು ಇತರ ರಾಷ್ಟ್ರಗಳು ತೀವ್ರವಾಗಿ ಸ್ಪರ್ಧಿಸಿದುದರಿಂದ ಇಂಗ್ಲೆಂಡಿನಲ್ಲಿ ಹಡಗು ನಿರ್ಮಾಣ ಕಡಿಮೆಯಾಯಿತು. ಉದಾಹರಣೆಗೆ, 1947ರಲ್ಲಿ ಪ್ರಪಂಚದ ಒಟ್ಟು ಹಡಗು ನಿರ್ಮಾಣದಲ್ಲಿ 50%ರಷ್ಟನ್ನು ಇಂಗ್ಲೆಂಡೊಂದೇ ನಿರ್ವಹಿಸುತ್ತಿತ್ತು. ಆದರೆ 1957ರ ವೇಳೆಗೆ ಈ ಸಂಖ್ಯೆ 20%ಕ್ಕೆ ಇಳಿಯಿತು. ಆದರೂ ಇದು ಪ್ರಪಂಚದ ಹಡಗು ಸರಕು; ಸಾರಿಗೆಯಲ್ಲಿ ಪ್ರಮುಖವಾಗಿ ಉಳಿದಿದೆ. ನೌಕಾಸಾರಿಗೆ ವ್ಯವಸ್ಥೆಯಿಂದ ಅಂತರರಾಷ್ಟ್ರೀಯ ವ್ಯಾಪಾರದ ಮೂಲಕ ಹಣ ಗಳಿಸುವುದಕ್ಕೂ ಆಹಾರ ವಸ್ತುಗಳನ್ನು ಆಮದು ಮಾಡಿಕೊಳ್ಳುವುದಕ್ಕೂ ಸಹಾಯವಾಗಿದೆ. ಆರ್ಥಿಕ ಪ್ರಗತಿಗೆ ಇದರಿಂದ ಬಹಳ ಮಟ್ಟಿಗೆ ನೆರವಾಗಿದೆ.

	ವಿಮಾನ ಸಾರಿಗೆ ವ್ಯವಸ್ಥೆ ಈಚಿನದು. 1919ರಲ್ಲಿ ಪ್ಯಾರಿಸ್ ಮತ್ತು ಲಂಡನ್ನಿನ ನಡುವೆ ವ್ಯವಸ್ಥಿತ ವಿಮಾನ ಸಂಚಾರ ವ್ಯವಸ್ಥೆ ಆರಂಭವಾಯಿತು. 1939ರಲ್ಲಿ ಬ್ರಿಟಿಷ್ ಓವರ್ಸೀಸ್ ವಿಮಾನ ಕಾರ್ಪೊರೇಷನ್ ಅಸ್ತಿತ್ವಕ್ಕೆ ಬಂತು. ಈಚಿನ ದಿನಗಳಲ್ಲಿ ವಿಮಾನ ಸಾರಿಗೆಗೆ ಇಂಗ್ಲೆಂಡಿನಲ್ಲಿ ಹೆಚ್ಚು ಪ್ರಾಶಸ್ತ್ಯ ಸಿಗಲಾರಂಭಿಸಿತು.

	ವಾಣಿಜ್ಯ ಕ್ರಾಂತಿ: 16, 17 ಮತ್ತು 18ನೆಯ ಶತಮಾನಗಳಲ್ಲಿ ಇಂಗ್ಲೆಂಡಿನ ಅಂತರರಾಷ್ಟ್ರೀಯ ವ್ಯಾಪಾರದಲ್ಲೂ ಅಗಾಧ ಬದಲಾವಣೆಗಳಾದವು. ಈ ಕ್ರಾಂತಿಯಿಂದ ಮಧ್ಯಯುಗದ ಅಂತರರಾಷ್ಟ್ರೀಯ ವ್ಯಾಪಾರ ಆಧುನಿಕ ಯುಗದ ವ್ಯಾಪಾರದ ಕ್ರಮಕ್ಕೆ ಬದಲಾವಣೆ ಹೊಂದಿತು. 15 ಮತ್ತು 16ನೆಯ ಶತಮಾನದಲ್ಲಿ ಹೊಸ ನೆಲಗಳನ್ನು ಕಂಡುಹಿಡಿದಾಗ ಇಂಗ್ಲೆಂಡಿನ ವ್ಯಾಪಾರದ ಪ್ರಗತಿ ಹೆಚ್ಚಿತು. ಭಾರತ ಮತ್ತು ಚೀನ ಇಂಗ್ಲೆಂಡಿನ ವಸ್ತುಗಳಿಗೆ ಒಳ್ಳೆಯ ಮಾರುಕಟ್ಟೆಗಳಾದುವು. ಇಂಗ್ಲೆಂಡು ಭಾರತ ಮತ್ತು ಉತ್ತರ ಅಮೆರಿಕದ ಮೇಲೆ ಸಂಪೂರ್ಣ ಅಧಿಕಾರ ಪಡೆದುಕೊಂಡದ್ದರಿಂದ ಅತ್ಯಂತ ವಿಶಾಲವಾದ ಮಾರುಕಟ್ಟೆ ಅದರ ವಸ್ತುಗಳಿಗೆ ದೊರಕಿದಂತಾಯಿತು. 16 ಮತ್ತು 17ನೆಯ ಶತಮಾನಗಳಲ್ಲಿ ಏಕಸ್ವಾಮ್ಯ ಪಡೆದ ಅನೇಕ ವ್ಯಾಪಾರ ಕಂಪೆನಿಗಳು ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಸಹಾಯ ಮಾಡಿದುವು. ಇವು ಪಡೆದ ವ್ಯಾಪಾರಲಾಭ ಔದ್ಯೋಗಿಕ ಕ್ರಾಂತಿಗೆ ಬಹಳ ಸಹಾಯಕವಾಯಿತು. ತನಗಿದ್ದ ನೌಕಾಸಾಮಥ್ರ್ಯವನ್ನು ಇಂಗ್ಲೆಂಡ್ ವ್ಯಾಪಾರದ ಅನುಕೂಲಕ್ಕಾಗಿ ಚೆನ್ನಾಗಿ ಉಪಯೋಗಿಸಿಕೊಂಡಿತು.

	ಅಂತರ್ದೇಶಿಯ ವ್ಯಾಪಾರಕ್ರಮ ಕ್ರಮವಾಗಿ ಅಭಿವೃದ್ಧಿಹೊಂದಿತು. 17ನೆಯ ಶತಮಾನದ ಅಂತ್ಯದಲ್ಲಿ ಇಂಗ್ಲೆಂಡ್ ಮತ್ತು ಮೇಲಿನ ಆಯಾತ ನಿರ್ಯಾತ ಹೆಚ್ಚು ಕಡಿಮೆ ರಾಷ್ಟ್ರೀಯ ಆದಾಯದ 15% ರಷ್ಟಿತ್ತು. 18ನೆಯ ಶತಮಾನದ ಅಂತ್ಯದ ವೇಳೆಗೆ ಇದು ದ್ವಿಗುಣಗೊಂಡಿತ್ತು. 1870ರ ವೇಳೆಗೆ ರಾಷ್ಟ್ರೀಯ ಆದಾಯದ ಸುಮಾರು 50%-60% ರಷ್ಟು ವಿದೇಶೀ ವ್ಯಾಪಾರದಿಂದಲೇ ಬರುತ್ತಿತ್ತು. 1870ರ ಅನಂತರ ದೇಶದ ನಿರ್ಯಾತ ರಾಷ್ಟ್ರೀಯ ಆದಾಯದ ಸರಾಸರಿಯ 16% ರಿಂದ 20%ಕ್ಕೆ ಮುಂದುವರಿಯಿತು. 18ನೆಯ ಶತಮಾನದ ಉದ್ದಕ್ಕೂ ಇದರ ವಿದೇಶಿವ್ಯಾಪಾರ ರಾಷ್ಟ್ರೀಯ ಆದಾಯಕ್ಕಿಂತ ವೇಗವಾಗಿ ಬೆಳೆಯಿತು.

	16ನೆ ಶತಮಾನದಿಂದ 18ನೆಯ ಶತಮಾನದ ವರೆಗೆ ವಿದೇಶಿ ವ್ಯಾಪಾರವನ್ನು ಕಂಪನಿಗಳು ನಡೆಸುತ್ತಿದ್ದುವು; ಇವುಗಳಿಗೆ ಏಕಸ್ವಾಮ್ಯವಿತ್ತು. ಈ ಕಂಪೆನಿಗಳು ಎರಡು ರೀತಿಯದಾಗಿರುತ್ತಿದ್ದುವು; ನಿಯಂತ್ರಿತ ಮತ್ತು ಕೂಡು ಬಂಡವಾಳ ಕಂಪನಿಗಳು, ನಿಯಂತ್ರಿತ ಕಂಪನಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಸ್ವತಂತ್ರವಾಗಿ ವ್ಯಾಪಾರದಲ್ಲಿ ತೊಡಗುತ್ತಿದ್ದ. ಆತ ಕಂಪನಿಯ ನಿಯಮಗಳನ್ನು ಅನುಸರಿಸುತ್ತಿದ್ದ. ಕೂಡುಬಂಡವಾಳ ಕಂಪನಿಯಲ್ಲಿ ಅನೇಕ ಬಂಡವಾಳಗಾರರು ಹಣ ಹೂಡುತ್ತಿದ್ದರು. ಬಂದ ಲಾಭವನ್ನು ಇವರು (ಷೇರುದಾರರು) ಹಂಚಿಕೊಳ್ಳುತ್ತಿದ್ದರು. ಹೊಸ ವ್ಯಾಪಾರಗಾರರು ಕೂಡುಬಂಡವಾಳ ಕಂಪನಿಗೆ ಪ್ರವೇಶಿಸುವುದು ಸುಲಭವಾಗಿತ್ತು.			 (ನೋಡಿ- ಕೂಡು-ಬಂಡವಾಳ-ಕಂಪನಿ)

	ಈ ಕಂಪನಿಗಳಲ್ಲಿ ಬಹಳ ಪ್ರಸಿದ್ಧವಾಗಿದ್ದದ್ದು ಈಸ್ಟ್ ಇಂಡಿಯ ಕಂಪನಿ. ಇದು 1600ರಲ್ಲಿ ಸ್ಥಾಪಿತವಾಗಿ ಇಂಡಿಯ ಮತ್ತು ಚೀನದೊಂದಿಗೆ ವ್ಯಾಪಾರದಲ್ಲಿ ನೇರ ಸಂಬಂಧ ಬೆಳೆಸಿಕೊಂಡಿತ್ತು. 1657ರಲ್ಲಿ ಇದು ಕೂಡು ಬಂಡವಾಳ ಕಂಪನಿಯಾಗಿ ಪರಿವರ್ತಿತವಾಗಿ ವ್ಯಾಪಾರ ಮುಂದುವರಿಸಿತು. ಇಡೀ ಏಷ್ಯದ ದೇಶಗಳೊಡನೆ ವ್ಯಾಪಾರದಲ್ಲಿ ಇದು ಏಕಸ್ವಾಮ್ಯ ಪಡೆದಿತ್ತು. ಆಮದಿನಲ್ಲಿ ಏಕಸ್ವಾಮ್ಯ ಪಡೆದಿದ್ದ ಈ ಕಂಪನಿ ತನಗಿಷ್ಟ ಬಂದಷ್ಟು ಬೆಲೆಗಳನ್ನು ನಿಗದಿಮಾಡಿ ಅತ್ಯಧಿಕ ಲಾಭ ಪಡೆಯುತ್ತಿತ್ತು. ಮುಂದೆ ಇದು ರಾಜಕೀಯದಲ್ಲೂ ಪ್ರವೇಶಿಸಿ ಭಾರತವನ್ನು ಗೆದ್ದಿತು. 1813ರಲ್ಲಿ ಇದು ಭಾರತದೊಡನೆ ವ್ಯಾಪಾರದಲ್ಲಿನ ಏಕಸ್ವಾಮ್ಯವನ್ನು ಕಳೆದುಕೊಂಡಿತು. ಇತರ ಕಂಪನಿಗಳಲ್ಲಿ ಮುಖ್ಯವಾದುವೆಂದರೆ ಹಡ್ಸಸನ್ ಬೇ ಕಂಪನಿ ಮತ್ತು ಸೌತ್ ಸೀ ಕಂಪನಿ. ಈ ಕಂಪನಿಗಳು ಇಂಗ್ಲೆಂಡಿನ ಪ್ರಗತಿಗೆ ಬಹಳ ಮಟ್ಟಿಗೆ ಸಹಾಯ ಮಾಡಿದುವೆಂದು ಹೇಳಬಹುದು.

	ಇಂಗ್ಲೆಂಡಿನ ವಾಣಿಜ್ಯಕ್ರಾಂತಿಯ ಮೂರು ಮುಖ್ಯ ಮುಖಗಳೆಂದರೆ ಮಾರುಕಟ್ಟೆಯ ವಿಸ್ತರಣೆ. ವಸ್ತುಗಳ ತಯಾರಿಕೆಯಲ್ಲಿ ಹೆಚ್ಚಿನ ಪರಿಣತಿ ಮತ್ತು ವ್ಯಾಪಾರದಲ್ಲಿನ ಸಂಯೋಜನೆ. ಈ ಮೂರರಿಂದಾಗಿ ಇಂಗ್ಲೆಂಡಿನ ವಿದೇಶೀ ವ್ಯಾಪಾರ ಅದ್ಭುತ ಪ್ರಗತಿ ಸಾಧಿಸಿತು.

	ಕೈಗಾರೀಕರಣದ ಅನಂತರ ಇಂಗ್ಲೆಂಡಿನ ವಾಣಿಜ್ಯ ಶೀಘ್ರವಾಗಿ ಪ್ರಗತಿ ಹೊಂದುವುದಕ್ಕೆ ಪ್ರಾರಂಭಿಸಿತು. ಇಂಗ್ಲೆಂಡು 19ನೆಯ ಶತಮಾನದ ಮಧ್ಯಭಾಗದ ಅನಂತರ ಮುಖ್ಯವಾಗಿ ಕಾರ್ಖಾನೆಯ ಸಿದ್ಧವಸ್ತುಗಳನ್ನು ರಫ್ತು ಮಾಡುತ್ತಿತ್ತು. ಆಹಾರವಸ್ತುಗಳನ್ನು ಮತ್ತು ಕಚ್ಚಾವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ರಫ್ತಿನಲ್ಲಿ ಮುಖ್ಯವಾಗಿದ್ದವೆಂದರೆ ಜವಳಿ, ಯಂತ್ರಗಳು, ಕಲ್ಲಿದ್ದಲು ಮತ್ತು ರಾಸಾಯನಿಕ ವಸ್ತುಗಳು.

	1900-1914ರ ವರೆಗೆ ಇಂಗ್ಲೆಂಡಿನ ವಿದೇಶೀ ವ್ಯಾಪಾರ ಇನ್ನೂ ಹೆಚ್ಚು ವೇಗವಾಗಿ ಬೆಳೆಯಿತು. ಇತರ ರಾಷ್ಟ್ರಗಳೂ ಕೈಗಾರಿಕಾಭಿವೃದ್ಧಿಯತ್ತ ಹೆಚ್ಚು ಹೆಚ್ಚು ಗಮನಗೊಡುತ್ತಿದ್ದುವು. ಇದಕ್ಕೆ ಕಾರಣ ಇಂಗ್ಲೆಂಡು ಅವಕ್ಕೆ ಅಗತ್ಯವಾದ ವಸ್ತುಗಳನ್ನು ಸರಬರಾಜು ಮಾಡುವುದರಲ್ಲಿ ಅತ್ಯಂತ ಸಮರ್ಥವಾಗಿತ್ತು. ಹೀಗಾಗಿ ವಾಣಿಜ್ಯ ಪ್ರಗತಿ ವೇಗವಾಗಿ ಬೆಳೆಯಿತು. 1913ರಲ್ಲಿ ವಿದೇಶಿ ವಾಣಿಜ್ಯ ಅತ್ಯುನ್ನತ ಮಟ್ಟ ಮುಟ್ಟಿತು.

	ಇಂಗ್ಲೆಂಡಿನ ವಾಣಿಜ್ಯ ಸಿದ್ಧಿಗೆ ಸಹಾಯಕವಾಗಿದ್ದುವೆಂದರೆ ಇಂಗ್ಲೆಂಡಿನ ಬ್ಯಾಂಕುಗಳು ವಿಮೆ ಹಾಗೂ ನೌಕಾವ್ಯವಸ್ಥೆ. 1844ರ ಅನಂತರ ಇಂಗ್ಲೆಂಡಿನ ಬ್ಯಾಂಕುಗಳು ವ್ಯಾಪಾರಕ್ಕೆ ಹಣ ಒದಗಿಸುವುದರ ಮೂಲಕ ಸಹಾಯ ಮಾಡಿದುವು. ವ್ಯವಸ್ಥಿತವಾದ ಹುಂಡಿ ಪೇಟೆ ಸ್ಥಾಪಿಸುವುದಕ್ಕೆ ಇಂಗ್ಲೆಂಡಿಗೆ ಸಾಧ್ಯವಾದದ್ದರಿಂದ ವಾಣಿಜ್ಯ ಪ್ರಗತಿ ವೇಗವಾಗಿ ಸಾಧ್ಯವಾಯಿತು. 1846ರ ಅನಂತರ ಸರ್ಕಾರದ ವಾಣಿಜ್ಯ ನೀತಿಯೂ ಇದಕ್ಕೆ ಸಹಾಯಕವಾಗಿತ್ತು. ರಕ್ಷಿತ ವ್ಯಾಪಾರಕ್ಕಿಂತ ಮುಕ್ತ ವ್ಯಾಪಾರದಿಂದಲೇ ತನಗೆ ಲಾಭವಿದೆ ಎಂಬುದನ್ನು ಅರಿತ ಸರಕಾರ ಇದಕ್ಕೆ ಸಹಾಯಕವಾದ ಕಾಯಿದೆ ರಚಿಸಿ ವ್ಯಾಪಾರಕ್ಕೆ ಪ್ರೋತ್ಸಾಹದಾಯಕವಾಯಿತು. 1932ರವರೆಗೆ ಅನೇಕ ಅಡ್ಡಿಗಳಿದ್ದರೂ ಮುಕ್ತವ್ಯಾಪಾರ ನೀತಿ ಮುಂದುವರಿಯಿತು. 19ನೆಯ ಶತಮಾನದ ಪ್ರಾರಂಭದಲ್ಲಿ ಇಂಗ್ಲೆಂಡು ತನ್ನ ರಫ್ತಿನ 55% ರಷ್ಟನ್ನು ಯೂರೋಪಿನ ರಾಷ್ಟ್ರಗಳಿಗೆ ಕಳುಹಿಸುತ್ತಿತ್ತು. ಆದರೆ 1920ರ ವೇಳೆಗೆ ಈ ರಾಷ್ಟ್ರಗಳಿಗೆ ಅದರ ರಫ್ತಿನ 20% ರಷ್ಟು ಮಾತ್ರ ಹೋಗುತ್ತಿತ್ತು. ಭಾರತ ಮತ್ತು ಇತರ ರಾಷ್ಟ್ರಗಳಿಗೆ ರಫ್ತು ಹೆಚ್ಚಾಯಿತು.

	ಪ್ರಥಮ ಮಹಾಯುದ್ಧದ ಅವಧಿಯಲ್ಲಿ ಇಂಗ್ಲೆಂಡಿನ ವಿದೇಶೀ ವ್ಯಾಪಾರ ಬಹಳ ಕಷ್ಟಕ್ಕೀಡಾಯಿತು. ಜಪಾನು ಜವಳಿ ಕೈಗಾರಿಕೆಯಲ್ಲಿ ಪರಿಣತಿಪಡೆದುಕೊಂಡು ಇಂಗ್ಲೆಂಡಿನ ಅನೇಕ ಮಾರುಕಟ್ಟೆಗಳನ್ನು ಹಿಡಿದುಕೊಂಡಿತು. ಕೆನಡ, ಆಸ್ಟ್ರೇಲಿಯ, ಅಮೆರಿಕಗಳಲ್ಲೂ ಕೈಗಾರಿಕೆಗಳು ಬೆಳೆದುವು. ಎಲ್ಲ ರಾಷ್ಟ್ರಗಳಿಗೂ ಸ್ವಾವಲಂಬಿಗಳಾಗುವುದರತ್ತ ಗಮನಕೊಡಲಾರಂಭಿಸಿದುವು. ಇಂಗ್ಲೆಂಡಿನ ಹದಗೆಟ್ಟ ಆರ್ಥಿಕ ಪರಿಸ್ಥಿತಿ ಸಹ ವಾಣಿಜ್ಯ ಅಡ್ಡಿಯನ್ನುಂಟುಮಾಡಿತು. 1920-33ರ ಆರ್ಥಿಕ ಕುಸಿತ ವಾಣಿಜ್ಯಕ್ಕೆ ಭಾರಿ ಕೊಡಲಿ ಪೆಟ್ಟು ಕೊಟ್ಟಿತು. ವಾಣಿಜ್ಯದ ಗತಿಯನ್ನೇ ಬಹಳ ಮಟ್ಟಿಗೆ ಕುಸಿಯುವಂತೆ ಮಾಡಿತು. ದೇಶಗಳ ಮುಕ್ತ ವ್ಯಾಪಾರದ ಬದಲಿಗೆ ವ್ಯಾಪಾರದ ಒಪ್ಪಂದಗಳಾದುವು.

	ಇಂಗ್ಲೆಂಡಿನ ವ್ಯಾಪಾರ ಈ ಅವಧಿಯಲ್ಲಿ ತೀರ ನಿರಾಶಾದಾಯಕವಾಗಿತ್ತು. ಇತರ ದೇಶಗಳ ರಫ್ತಿಗೆ ಹೋಲಿಸಿದರೆ ಇಂಗ್ಲೆಂಡಿನ ರಫ್ತು ಅತ್ಯಂತ ಶೋಚನೀಯ ಸ್ಥಿತಿ ಮುಟ್ಟಿತೆಂದು ಹೇಳಬಹುದು. 1913ರಲ್ಲಿ ಪ್ರಪಂಚದ ಒಟ್ಟು ರಫ್ತಿನ 13.11%ರಷ್ಟು ಇಂಗ್ಲೆಂಡಿನದಾಗಿತ್ತು. 1927ರಲ್ಲಿ ಇದು 11.10ಕ್ಕೂ 1932ರಲ್ಲಿ 9.82ಕ್ಕೂ ಇಳಿಯಿತು. 1950ರವರೆಗೆ ಇಂಗ್ಲೆಂಡಿನ ರಫ್ತು 1914ರ ಮಟ್ಟವನ್ನು ತಲುಪಲೇ ಇಲ್ಲ. ರಫ್ತು ಒಂದು ಕಡೆ ಇಷ್ಟು ಕಡಿಮೆ ಮಟ್ಟ ಮುಟ್ಟಿದರೆ, ಆಮದು ಇದೇ ಸಮಯದಲ್ಲಿ ವೃದ್ಧಿ ಹೊಂದಿತು. 1924ರಲ್ಲಿ ಅದು 1913ರ ಮಟ್ಟವನ್ನು ಮೀರಿತು. 1930ರಲ್ಲಿ ಇದು ಕಡಿಮೆ ಮಟ್ಟವನ್ನು ಸೂಚಿಸಿದರೂ 1936ರ ಅನಂತರ 1929ರ ಮಟ್ಟಕ್ಕಿಂತ ಹೆಚ್ಚಾಯಿತು.

	ಮೊದಲನೆಯ ಮಹಾಯುದ್ಧದ ಅನಂತರ ಆಮದಿನ ರೀತಿ ಹೆಚ್ಚು ಕಡಿಮೆ 10ನೆಯ ಶತಮಾನದ ಕೊನೆಯ ಭಾಗದ ಆಮದÀು ನೀತಿಯನ್ನು ಹೋಲುತ್ತಿತ್ತು. ಸಿದ್ಧಪಡಿಸಿದ ವಸ್ತುಗಳನ್ನು ಆಮದುಮಾಡಿಕೊಳ್ಳಲಾಗುತ್ತಿತ್ತು. ಮಾಂಸ ಮತ್ತು ಹೈನು ವಸ್ತುಗಳ ಆಮದು 4.53% ರಷ್ಟಿತ್ತು. 30%ರಷ್ಟು ಕಚ್ಚಾ ಪದಾರ್ಥಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಉಳಿದ ಆಮದು ಸಿದ್ಧ ವಸ್ತುಗಳಿಂದ ಕೂಡಿರುತ್ತಿತ್ತು. ಇಂಗ್ಲೆಂಡಿನ ಆಮದಿನ ಹೆಚ್ಚಳದಿಂದ ಅದರ ಅಂತರರಾಷ್ಟ್ರೀಯ ಪಾವತಿ ಶುಲ್ಕ ಪ್ರತಿಕೂಲದ್ದಾಗಿತ್ತು.

	ಎರಡನೆಯ ಮಹಾಯುದ್ಧದ ಸಮಯದಲ್ಲಿ ಇಂಗ್ಲೆಂಡು ತನ್ನ ವಿದೇಶಿ ನಿವೇಶನದ ಹಣವನ್ನು ಕಡಿಮೆ ಮಾಡಿಕೊಳ್ಳಬೇಕಾಯಿತು. 1945ರಿಂದೀಚೆಗೆ, ವಿದೇಶಿ ವ್ಯಾಪಾರಕ್ಕೆ ಸರ್ಕಾರ ಎಲ್ಲ ರೀತಿಯಲ್ಲೂ ಸಹಾಯ ಮಾಡುತ್ತ ಬಂತು. ಸರ್ಕಾರ, ಕಚ್ಚಾ ಮಾಲನ್ನು ರಫ್ತು ಮಾಡುವುದಕ್ಕೆ ಆದ್ಯತೆ, ರಫ್ತಿಗೆ ಸಾಲದ ಭರವಸೆ, ಹೊಸ ಮಾರುಕಟ್ಟೆಗಳನ್ನು ಕಂಡುಹಿಡಿಯುವುದಕ್ಕೆ ಸಹಾಯ ಇವನ್ನೊದಗಿಸಿ ವಿದೇಶೀ ವ್ಯಾಪಾರಕ್ಕೆ ಸಹಾಯ ಮಾಡಿತು. ಇವೆಲ್ಲದರಿಂದಾಗಿ ಅದರ ರಫ್ತು 1957ರಲ್ಲಿ 1948ರ ಬೆಲೆಗಳಿಗೆ ಹೋಲಿಸಿದಂತೆ 60% ರಷ್ಟು ವಿಸ್ತಾರಗೊಂಡಿತು. ಆದರೆ ಜವಳಿಯ ರಫ್ತು ಕಡಿಮೆಯಾಗುತ್ತಲೇ ಬಂತು. ಕಲ್ಲಿದ್ದಲಿನ ರಫ್ತು ನಿಂತೇಹೋಯಿತು. ಆದರೆ ಹೊಸ ಉದ್ಯಮಗಳ ರಫ್ತು ವೃದ್ಧಿಯಾಯಿತು. ಇವುಗಳಲ್ಲಿ ಮುಖ್ಯವಾದುವೆಂದರೆ ಮೋಟಾರು ಮತ್ತು ವಿಮಾನಯಾನದ ಸಾಮಾನುಗಳು. 1950ರಲ್ಲಿ ಇವು ಒಟ್ಟು ರಫ್ತಿನಲ್ಲಿ 12% ರಷ್ಟಿದ್ದವು. ಸೈನಿಕ ವಿಮಾನ ಸಾಮಗ್ರಿ ಇವುಗಳಲ್ಲಿ ಪ್ರಧಾನವಾಗಿತ್ತು.

	ಕಾರ್ಮಿಕ ಸಂಘ ಚಳವಳಿ : ಕೈಗಾರಿಕಾಕ್ರಾಂತಿಯ ಇನ್ನೊಂದು ಪರಿಣಾಮವೆಂದರೆ ಕಾರ್ಮಿಕ ಸಂಘಟನೆಯ ಚಳವಳಿ. ಕ್ರಾಂತಿ ನಡೆದಾಗ ಕೂಲಿಗಾರರು ಹಳ್ಳಿಗಳಿಂದ ಪಟ್ಟಣಕ್ಕೆ ವಲಸೆ ಬಂದರು. ಅವರ ಬಳಿ ಮಾರಲು ತಮ್ಮ ಕುಶಲತೆ, ಶ್ರಮ ಇವನ್ನು ಬಿಟ್ಟರೆ ಬೇರೇನೂ ಇರಲಿಲ್ಲ. ಹೀಗಾಗಿ ಬಂಡವಾಳಗಾರರು ಅವರನ್ನು ಶೋಷಿಸುವ ಸಾಧ್ಯತೆ ಉಂಟಾಯಿತು. 18ನೆಯ ಶತಮಾನದ ಆರಂಭದ ವೇಳೆಗೆ ಇಂಗ್ಲೆಂಡಿನ ಕೈಗಾರಿಕೆಯ ರಂಗ ಸಾಕಷ್ಟು ಬಂಡವಾಳ ಪ್ರಧಾನವಾಗಿ ಬೆಳೆದು ಕಾರ್ಮಿಕ ಹಾಗೂ ಮಾಲಿಕರ ನಡುವೆ ಸಾಕಷ್ಟು ಬಿರುಕನ್ನುಂಟುಮಾಡಿತ್ತು.

	16ನೆಯ ಶತಮಾನದ ಕೊನೆಯ ಭಾಗದಲ್ಲಿ ವೃತ್ತಿಸಂಘಗಳು ಕ್ಷಯಿಸಿದ ಅನಂತರ ಕಾರ್ಮಿಕರೇ ಕೆಲವು ಸಂಘಗಳನ್ನು ರಚಿಸಿಕೊಂಡರು. ಆದರೆ ಸರ್ಕಾರದ ಮನೋಭಾವ ಇದಕ್ಕೆ ವಿರೋಧವಾಗಿತ್ತು. ಕೆಲವು ವೃತ್ತಿಗಳಿಗೆ ಗರಿಷ್ಠ ಕೂಲಿಯನ್ನು ಸರ್ಕಾರ ನಿಗದಿ ಮಾಡಿ, ಆ ವೃತ್ತಿಗಳಲ್ಲಿ ಸಂಘಗಳನ್ನು ನಿಷೇಧಿಸಿತು. 1720 ಮತ್ತು 1725ರ ಕಾಯಿದೆಗಳ ಮೂಲಕ ದರ್ಜಿಗಳಲ್ಲಿ, ನೇಕಾರರಲ್ಲಿ ಹೆಣಿಗೆ ಕೈಗಾರಿಕೆ ಮುಂತಾದ ಕ್ಷೇತ್ರಗಳಲ್ಲಿ ಸಂಘಗಳನ್ನು ನಿಷೇಧಿಸಲಾಗಿತ್ತು.

ಕೈಗಾರಿಕಾಕ್ರಾಂತಿಯೊಡನೆ ಕಾರ್ಮಿಕ ಸಂಘಗಳಿಗೆ ಹೊಸ ಚೇತನ ದೊರೆತಂತಾಯಿತು. 1790ರ ವೇಳೆಗೆ ಕಾರ್ಮಿಕ ಸಂಘಗಳ ಅವಶ್ಯಕತೆಯ ತೀವ್ರತೆಯನ್ನು ಕಾರ್ಮಿಕರು ಮನಗಂಡರು. ಫ್ರಾನ್ಸಿನಲ್ಲಿ ನಡೆದ ಕ್ರಾಂತಿ ಇಂಗ್ಲೆಂಡಿನ ಕಾರ್ಮಿಕರಿಗೆ ಉತ್ತೇಜಕವಾಯಿತು. ಕಾರ್ಮಿಕರು ಕೆಲವು ಸಂಘಗಳನ್ನು ರಚಿಸಿಕೊಂಡರು. ಆದರೆ 1793ರಲ್ಲಿ ಇಂಗ್ಲೆಂಡ್ ಮತ್ತು ಫ್ರಾನ್ಸ್ ನಡುವೆ ಯುದ್ಧ ಪ್ರಾರಂಭವಾದುದರಿಂದ 1797 ಮತ್ತು 1800ರ ಕಾಯಿದೆಗಳ ಮೂಲಕ, ಕೂಲಿಯ ಹೆಚ್ಚಳ, ಕೆಲಸ ಗಂಟೆಗಳಲ್ಲಿ ಇಳಿಕೆ, ಬೇಡಿಕೆಗಳ ಪೂರೈಕೆಗಾಗಿ ಮುಷ್ಕರ-ಇವುಗಳಿಗಾಗಿ ರಚಿತವಾಗುವ ಸಂಘಗಳನ್ನು ನಿಷೇಧಿಸಲಾಯಿತು. ಉದ್ಯಮಪದ್ಧತಿಗಳಲ್ಲೂ ಸಂಘರಚನೆಯನ್ನು ನಿಷೇಧಿಸಲಾಯಿತು. ವೃತ್ತಿ ಸಂಘಗಳ ರಚನೆ ಪಾತಕವೆಂದು ತೀರ್ಮಾನಿಸಲಾಗಿದ್ದರೂ ಕಾರ್ಮಿಕರ ರಹಸ್ಯ ಸಂಸ್ಥೆಗಳು ತಮ್ಮ ಕಾರ್ಯಚಟುವಟಿಕೆಯನ್ನು ಮುಂದುವರಿಸಿದುವು.

	1815ರಲ್ಲಿ ನೆಪೋಲಿಯನ್ನನ ಯುದ್ಧ ಮುಗಿದ ಅನಂತರ ಕಾರ್ಮಿಕರ ಪಾಡು ಇನ್ನೂ ಶೋಚನೀಯವಾಯಿತು. ಆರ್ಥಿಕ ಕುಸಿತ ಅವರ ಸ್ಥಿತಿಯನ್ನು ಮತ್ತೂ ಉಲ್ಬಣಗೊಳಿಸಿತು. ಕೂಲಿಯ ದರ ಕಡಿಮೆಯಾದುದಲ್ಲದೆ ನಿರುದ್ಯೋಗ ಉಲ್ಬಣಿಸಿತು. ಫ್ರಾನ್ಸಿಸ್ ಪ್ಲೇಸ್ ಎಂಬ ಆಚಾರ್ಯದರ್ಜಿ ಕಾರ್ಮಿಕರ ಸ್ಥಿತಿಯನ್ನು ಉತ್ತಮಪಡಿಸುವುದರಲ್ಲಿ ಮುಂದಾದ. ಆತ ರ್ಯಾಡಿಕಲ್ ಪಾರ್ಟಿಯ ಜೋಸೆಫ್ ಹ್ಯೂಮನ್ ಸಹಾಯದಿಂದ 1824ರಲ್ಲಿ ಸಂಘರಚನೆಯ ಕಾನೂನನ್ನು ತಿದ್ದುಪಡಿ ಮಾಡಿಸುವುದರಲ್ಲಿ ಯಶಸ್ವಿಯಾದ. ಆಗ ಮುಷ್ಕರವನ್ನು ಕಾಯಿದೆ ಬದ್ದ ಮಾಡಲಾಯಿತು. ಪರಿಣಾಮವಾಗಿ 1824ರಲ್ಲಿ ಅನೇಕ ಮುಷ್ಕರಗಳಾದವು. ಆದ್ದರಿಂದ 1825ರಲ್ಲಿ 1824ರ ಕಾನೂನಿಗೆ ಒಂದು ತಿದ್ದುಪಡಿ ಜಾರಿಗೆ ಬಂತು. ಅದು ಮುಷ್ಕರ ಹಾಗೂ ರಾಷ್ಟ್ರೀಯ ಕಾರ್ಮಿಕ ಸಂಘವನ್ನು ಸಂಘಟಿಸುವ ಯತ್ನ ನಡೆಯಿತು. ಅದರ ಪರಿಣಾಮವಾಗಿ 1834ರಲ್ಲಿ ಬೃಹತ್ ರಾಷ್ಟ್ರೀಯ ಕಾರ್ಮಿಕ ಸಂಘ ಅಸ್ತಿತ್ವಕ್ಕೆ ಬಂತು. ಈ ಸಂಸ್ಥೆಯ ಸದಸ್ಯರ ಸಂಖ್ಯೆ ಒಂದು ಕಾಲಕ್ಕೆ ಐದು ಲಕ್ಷದಷ್ಟಿತ್ತೆಂದು ಹೇಳಲಾಗಿದೆ. ರಾಬರ್ಟ್ ಓವೆನ್ ಇದರ ಸ್ಥಾಪಕ. ಆದರೆ ಇದು ಬಹಳ ಕಾಲ ಬಾಳಲಿಲ್ಲ. ಕಾರ್ಮಿಕರು ಮುಖ್ಯ ಉದ್ಯಮಗಳನ್ನು ತಾವೇ ವಶಪಡಿಸಿಕೊಳ್ಳಬೇಕೆಂಬುದು ಇವನ ವಾದವಾಗಿದ್ದುದೇ ಕಾರಣ. ಈ ಸಂಸ್ಥೆಗೆ ಇಂಥ ಕೆಲಸ ಸಾಧ್ಯವಾಗಲಿಲ್ಲ. ಇದಕ್ಕೆ ಅಗತ್ಯವಿದ್ದ ನಿಧಿ ಸಹ ಸಂಸ್ಥೆಯ ಬಳಿ ಇರಲಿಲ್ಲ.

	1850ರ ವೇಳೆಗೆ ಮತ್ತೆ ಕಾರ್ಮಿಕ ಸಂಘಗಳು ತಲೆ ಎತ್ತಲಾರಂಭಿಸಿದುವು. ಈಗ ಅವು ತಮ್ಮ ಕ್ರಾಂತಿಕಾರಕ ಭಾವನೆಗಳನ್ನು ಬಿಟ್ಟು ಕಾರ್ಮಿಕರ ಸ್ಥಿತಿಗತಿಗಳನ್ನು ಸರಿಪಡಿಸುವ ಯೋಚನೆಯನ್ನಿಟ್ಟುಕೊಳ್ಳಲಾರಂಭಿಸಿದುವು.

	ರಾಷ್ಟ್ರೀಯ ಕಾರ್ಮಿಕ ಸಂಘಗಳನ್ನು ಸಂಘಟಿಸುವ ಯೋಜನೆಯನ್ನು ಕೈಬಿಡಲಾಯಿತು. ಬದಲಾಗಿ ಪ್ರತಿಯೊಂದು ವೃತ್ತಿಯಲ್ಲೂ ನಿರತರಾಗಿದ್ದ ಕಾರ್ಮಿಕರ ಸಂಘಗಳ ಸ್ಥಾಪನೆಗೆ ಯತ್ನ ನಡೆಸಲಾಯಿತು. ಎಂಜಿನಿಯರಿಂಗ್ ಉದ್ಯಮದಲ್ಲಿ ತೊಡಗಿದ್ದ ಕಾರ್ಮಿಕರು 1851ರಲ್ಲಿ ಎಂಜಿನಿಯರುಗಳ ಸಂಯೋಜಿತ ಸಂಸ್ಥೆಯೊಂದನ್ನು ಸ್ಥಾಪಿಸಿ ಇಂಥ ಸಂಘಗಳ ರಚನೆಗೆ ಮುಂದಾಳುಗಳಾದರು. ಇದು ರಾಷ್ಟ್ರದ ಎಲ್ಲ ಕುಶಲ ಶಿಲ್ಪ ಕೆಲಸಗಾರರನ್ನೂ ಸದಸ್ಯರನ್ನಾಗಿ ಪಡೆಯುವ ಉದ್ದೇಶವಿಟ್ಟುಕೊಂಡಿತ್ತು. ಇದಕ್ಕೆ ಅಪಾರ ನಿಧಿ ಸಂಗ್ರಹವಾಗಿ ಪ್ರೋತ್ಸಾಹ ದೊರೆಯಿತು. ಕಾರ್ಮಿಕರ ನಿರುದ್ಯೋಗ ಕಾಲದಲ್ಲಿ ಪರಿಹಾರ, ವೈದ್ಯಸೌಲಭ್ಯ, ನಿವೃತ್ತಿವೇತನ, ಮುಷ್ಕರಸಂದರ್ಭದಲ್ಲಿ ಧನ ಸಹಾಯ ಇವುಗಳಿಗೆ ಈ ನಿಧಿಯನ್ನು ಉಪಯೋಗಿಸಿಕೊಳ್ಳಲಾಯಿತು. ಎಲ್ಲ ವೃತ್ತಿಗಳಲ್ಲೂ ಇಂಥ ಸಂಘಗಳು ಹುಟ್ಟಿಕೊಂಡವು. 1869ರ ಕಾರ್ಮಿಕಸಂಘದ ಕಾಯಿದೆಯ ಪ್ರಕಾರ ಕಾರ್ಮಿಕ ಸಂಘಗಳ ನಿಧಿಗೆ ರಕ್ಷಣೆ ಕೊಡಲಾಯಿತು. 1871ರ ಕಾರ್ಮಿಕ ಸಂಘದ ಕಾಯಿದೆ, ಕಾರ್ಮಿಕ ಸಂಘಗಳಿಗೆ ಹೊಸ ಸ್ಥಾನಮಾನಗಳನ್ನು ಕಲ್ಪಿಸಿಕೊಟ್ಟಿತು. ಕಾನೂನಿನ ದೃಷ್ಟಿಯಲ್ಲಿ ಈ ಕಾಯಿದೆಗಳಿಂದಾಗಿ ಕಾರ್ಮಿಕ ಸಂಘಗಳಿಗೆ ಒಂದು ಗೌರವದÀ ಸ್ಥಾನ ದೊರೆಯಿತು. 1868ರಲ್ಲಿ ಕಾರ್ಮಿಕ ಸಂಘಗಳ ಪರಿಷತ್ತು ಸ್ಥಾಪಿತವಾಯಿತು.

	19ನೆಯ ಶತಮಾನದ ಕೊನೆಯ ವೇಳೆಗೆ ಕಾರ್ಮಿಕ ಸಂಘ ಬಹಳ ವೇಗವಾಗಿ ಎಲ್ಲ ದಿಕ್ಕುಗಳಿಗೂ ಹಬ್ಬಲು ಪ್ರಾರಂಭಿಸಿತು. 1880ಕ್ಕಿಂತ ಮುಂಚೆ ಕಾರ್ಮಿಕ ಸಂಘಗಳು ಕುಶಲ ಕಾರ್ಮಿಕರಿಗೆ ಮಾತ್ರ ಮೀಸಲಾಗಿರುತ್ತಿತ್ತು. ಆದರೆ ಅನಂತರ ಕುಶಲ ಕಾರ್ಮಿಕರೆಲ್ಲರೂ ಕಾರ್ಮಿಕ ಸಂಘಗಳಲ್ಲಿ ಪ್ರವೇಶ ದೊರಕಲಾರಂಭವಾಯಿತು. 1889ರ ಹಡಗುಕೂಲಿಗಳ ಮುಷ್ಕರದ ವಿಜಯ ಕುಶಲರಲ್ಲದ ಕಾರ್ಮಿಕರ ಸಂಘಗಳಿಗೆ ಆದರ್ಶ ಪ್ರಾಯವಾಗಿ ಅನೇಕ ಸಂಘಗಳು ಹುಟ್ಟಿಕೊಂಡವು. ಕೃಷಿರಂಗದ ಕಾರ್ಮಿಕರು ಕೂಡ ಕಾರ್ಮಿಕ ಸಂಘ ಆರಂಭಿಸಿದರು. ಆದರೆ ಹಣವಂತರ ವಿರೋಧ ಇದಕ್ಕೆ ಮೊದಲಿಂದಲೂ ಇತ್ತು.

	ಈ ಅವಧಿಯ ಮುಖ್ಯವಾದ ಬೆಳವಣಿಗೆಯೆಂದರೆ ಕಾರ್ಮಿಕರ ಮೇಲೆ ಸಮಾಜವಾದದ ಪ್ರಭಾವ. ಇದರಿಂದಾಗಿ ಕಾರ್ಮಿಕ ಸಂಘಗಳ ಗುರಿಗಳಲ್ಲೂ ಸ್ವಲ್ಪ ಬದಲಾವಣೆಯಾಯಿತು. 1893ರಲ್ಲಿ ಸಮಾಜವಾದದ ಗುರಿಗಳನ್ನುಳ್ಳ ಕಾರ್ಯಕ್ರಮಗಳನ್ನು ಕಾರ್ಮಿಕರಲ್ಲಿ ಪ್ರತಿನಿಧಿಸುವ ಲೇಬರ್ ಪಕ್ಷ ಸ್ಥಾಪಿತವಾಯಿತು. 1898ರಲ್ಲಿ ಕಾರ್ಮಿಕ ಸಂಘಗಳ ಪರಿಷತ್ತು (ಟ್ರೇಡ್ ಯೂನಿಯನ್ ಕಾಂಗ್ರೆಸ್) ಅದಕ್ಕೆ ಮನ್ನಣೆ ನೀಡಿತು.

	20ನೆಯ ಶತಮಾನದ ಪ್ರಾರಂಭದಲ್ಲೆ ಕಾರ್ಮಿಕ ಸಂಘಗಳು ಅನೇಕ ಕಠಿಣ ದಿನಗಳನ್ನು ಕಾಣಬೇಕಾಯಿತು. ಲ್ಯಾನ್ಸ್ ವಾಲ್ ರೈಲ್ವೆ ಕಾರ್ಮಿಕರು ಮುಷ್ಕರ ಹೂಡಿದಾಗ ಕಂಪನಿ ಅದರ ವಿರುದ್ಧ ಮೊಕದ್ದಮೆ ಹೂಡಿ ಕಾರ್ಮಿಕ ಸಂಘದಿಂದ ನಷ್ಟವನ್ನು ವಸೂಲಿ ಮಾಡಿಕೊಂಡಿತು. ಇದರಿಂದ ಕಾರ್ಮಿಕ ಸಂಘದ ನಿಧಿಗೆ ಬಹಳ ನಷ್ಟವಾಯಿತು. 1908ರಲ್ಲಿ ಆಸ್ ಬಾರ್ನ್ ಎಂಬ ವ್ಯಕ್ತಿ ತನ್ನ ಸಂಘ ಚುನಾವಣೆಯಲ್ಲಿ ಹಣ ತೊಡಗಿಸುವುದರ ವಿರುದ್ಧ ಮೊಕದ್ದಮೆ ಹೂಡಿದ. ಆತ ಮೊಕದ್ದಮೆಯಲ್ಲಿ ವಿಜಯಿಯೂ ಆದ. 1913ರಲ್ಲಿ ಜಾರಿಗೆ ಬಂದ ಕಾರ್ಮಿಕ ಸಂಘಗಳ ಕಾಯಿದೆ, ಕಾರ್ಮಿಕ ಸಂಘಗಳು ತಮ್ಮ ರಾಜಕೀಯ ಚಟುವಟಿಕೆಗಳಿಗೆ ಪ್ರತ್ಯೇಕ ಹಣಸಂಗ್ರಹ ಮಾಡಬಹುದೆಂಬ ನಿಯಮಮಾಡಿತು.

	ಮೊದಲನೆಯ ಮಹಾಯುದ್ಧ ಪ್ರಾರಂಭವಾಗುವ ವೇಳೆಗೆ ಕಾರ್ಮಿಕ ಸಂಘಗಳು ಇಂಗ್ಲೆಂಡಿನಲ್ಲಿ ಪ್ರಬಲ ಸ್ಥಿತಿಯಲ್ಲಿದ್ದುವು. 1920ರಲ್ಲಿ ಅವುಗಳ ಸದಸ್ಯರ ಸಂಖ್ಯೆ 40 ಲಕ್ಷದಿಂದ 80 ಲಕ್ಷಕ್ಕೇರಿತು. 1922ರ ಚುನಾವಣೆಯಲ್ಲಿ ಕಾರ್ಮಿಕಪಕ್ಷ ಕಾಮನ್ಸ್ ಸಭೆಯಲ್ಲಿ 122 ಸ್ಥಾನಗಳನ್ನು ದೊರಕಿಸಿಕೊಂಡಿತು. ಸಂಯೋಜಿತ ಕಾರ್ಮಿಕ ಸಂಘಗಳು ಹೆಚ್ಚು ಅಸ್ತಿತ್ವಕ್ಕೆ ಬರಲಾರಂಭಿಸಿದುವು. ಪ್ರತಿಯೊಂದು ರಂಗದಲ್ಲೂ ಬೃಹದಾಕಾರದ ಕಾರ್ಮಿಕರ ಸಂಘಗಳು ಬೆಳೆದುಕೊಂಡುವು. ರ್ಯೆಲ್ವೆ ಸಾರಿಗೆ, ಮುದ್ರಣ ಇವುಗಳಲ್ಲಿ ಬೃಹದಾಕಾರದ ಕಾರ್ಮಿಕ ಸಂಘಗಳು ಪ್ರಾರಂಭವಾದುವು. ಇಡೀ ಕೈಗಾರಿಕಾ ರಂಗದಲ್ಲಿ ಕಾರ್ಮಿಕರ ಸಹಕಾರವಿರಬೇಕೆಂದು ಇವುಗಳ ಉದ್ದೇಶವಿತ್ತು. ಮುಷ್ಕರಗಳಲ್ಲಿ ಎಲ್ಲ ಕಾರ್ಮಿಕ ಸಂಘಗಳೂ ಸಹಕರಿಸಿ ಉದ್ದೇಶಗಳನ್ನು ಪೂರೈಸಿಕೊಳ್ಳುವ ವಿಚಾರ ಪ್ರಧಾನವಾಯಿತು. 1920ರಲ್ಲಿ ಕಲ್ಲಿದ್ದಲ ಕೈಗಾರಿಕೆಯಲ್ಲಿ ನಡೆದ ಮುಷ್ಕರಕ್ಕೆ ಎಲ್ಲ ಕಾರ್ಮಿಕ ಸಂಘಗಳೂ ಸೇರಿ ಸಹಾನುಭೂತಿ ಮುಷ್ಕರ ಹೂಡಿದವು. ಆದರೆ ಈ ಮುಷ್ಕರ ವಿಜಯ ಗಳಿಸಲಿಲ್ಲ. ಸರ್ಕಾರ 1922ರಲ್ಲಿ ಕಾರ್ಮಿಕ ವಿಚಾರ ಹಾಗೂ ಕಾರ್ಮಿಕ ಸಂಘಗಳ ಕಾಯಿದೆಯನ್ನು ಜಾರಿಗೆ ತಂದು ಎಲ್ಲ ಕಾರ್ಮಿಕ ಸಂಘಗಳೂ ಸೇರಿ ಮಾಡುವ ಮುಷ್ಕರವನ್ನು ಕಾನೂನುಬಾಹಿರವೆಂದು ಘೋಷಿಸಿತು. ಈ ಕಾಯಿದೆಯಿಂದ ಕಾರ್ಮಿಕ ಸಂಘದ ಸದಸ್ಯತ್ವ ಬಹಳ ಕಡಿಮೆಯಾಯಿತು. 1930ರಲ್ಲಿ ಸದಸ್ಯರ ಸಂಖ್ಯೆ 37.5 ಲಕ್ಷಕ್ಕಿಳಿಯಿತು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಕಾರ್ಮಿಕ ಸಂಘಗಳು ದೇಶರಕ್ಷಣೆಯ ವಿಷಯವಾಗಿ ಹೆಚ್ಚು ಜವಾಬ್ದಾರಿ ವಹಿಸಿ ಹೆಚ್ಚಿನ ಉತ್ಪಾದನೆಗೆ ಸಹಾಯಕವಾದುವು. ಯುದ್ಧಾನಂತರ ಕಾರ್ಮಿಕ ಪಕ್ಷ ಆಡಳಿತ ಪಕ್ಷವಾಯಿತು. ಈ ಅವಧಿಯಲ್ಲಿ ಕಾರ್ಮಿಕ ಸಂಘಗಳ ಚಟುವಟಿಕೆ ಹೆಚ್ಚಿ ಅವುಗಳ ಸದಸ್ಯರ ಸಂಖ್ಯೆಯೂ ಬೆಳೆಯಿತು. 1939ರಲ್ಲಿ 1,019 ಕಾರ್ಮಿಕ ಸಂಘಗಳಿದ್ದು ಅವುಗಳ ಸದಸ್ಯ ಸಂಖ್ಯೆ 63 ಲಕ್ಷದಷ್ಟಿತ್ತು. ಕಾರ್ಮಿಕ ಸಂಘಗಳು ಪರಸ್ಪರ ವಿಲಯನವಾಗುತ್ತ ನಡೆದು 1959ರ ವೇಳೆಗೆ ದೇಶದಲ್ಲಿ 651 ಕಾರ್ಮಿಕ ಸಂಘಗಳಿದ್ದು ಅವುಗಳ ಸದಸ್ಯ ಸಂಖ್ಯೆ 96 ಲಕ್ಷದಷ್ಟಿತ್ತು. ಆದರೆ ಮಹಾಯುದ್ಧಾನಂತರದ ಅಹಿತಕರ ವಿಷಯವೆಂದರೆ ಕಾರ್ಮಿಕ ಹಾಗೂ ಉದ್ಯಮಪತಿಗಳ ನಡುವೆ ಸಾಮರಸ್ಯ ಕಡಿಮೆಯಾಗಿ ಕಾರ್ಮಿಕವಿವಾದಗಳು ಹೆಚ್ಚಿದುವು. 1957ರಲ್ಲಿ ಸುಮಾರು 2,855 ವಿವಾದಗಳಿದ್ದು 84 ಲಕ್ಷ ಕೆಲಸದ ದಿನಗಳು ನಷ್ಟವಾದುವೆಂದರೆ ಪರಿಸ್ಥಿತಿ ಎಷ್ಟು ಹದಗೆಟ್ಟಿತ್ತೆಂಬುದು ಅರ್ಥವಾಗುತ್ತದೆ. ಯುದ್ಧಾನಂತರ ಮತ್ತೊಂದು ಬೆಳವಣಿಗೆಯೆಂದರೆ ಕೈಗಾರಿಕೆಯಲ್ಲೇ ಅಲ್ಲದೆ ಇತರ ವರ್ಗಗಳಲ್ಲೂ ಕಾರ್ಮಿಕ ಸಂಘಗಳು ಹಬ್ಬಿದ್ದು. ಕೃಷಿರಂಗದಲ್ಲಿ ಕಾರ್ಮಿಕ ಸಂಘಗಳು ಹೆಚ್ಚಿದುವು.

	ಕಾರ್ಮಿಕ ಸಂಘಗಳು ಈಗ ದೇಶದ ರಾಜಕೀಯ ಹಾಗೂ ಆರ್ಥಿಕ ವಿಚಾರಗಳಲ್ಲಿ ಸಕ್ರಿಯವಾದ ಪಾತ್ರ ವಹಿಸುತ್ತಿವೆ. ಬ್ರಿಟನ್ನಿನ ಕಾರ್ಮಿಕ ಸಂಘದ ಚಟುವಟಿಕೆಗಳು ಕಾರ್ಮಿಕಸಂಘ ಕಾಂಗ್ರೆಸ್ಸಿನ ನಿರ್ದೇಶಕ್ಕನುಗುಣವಾಗಿ ನಡೆಯುತ್ತವೆ. ಪ್ರತಿ ಸೆಪ್ಟಂಬರಿನಲ್ಲಿ ನಡೆಯುವ ಟ್ರೇಡ್ ಯೂನಿಯನ್ ಕಾಂಗ್ರೆಸ್ಸಿನ ಅಧಿವೇಶನದ ಪ್ರಣಾಳಿಕೆಗಳು ಕಾರ್ಮಿಕ ಪಕ್ಷಕ್ಕೆ ಹೆಚ್ಚು ಕಡಿಮೆ ಆಜ್ಞೆಗಳಿದ್ದಂತೆ. ಕಾರ್ಮಿಕ ಪಕ್ಷ ಈ ಸಂಘಗಳ ಸದಸ್ಯರ ಬೆಂಬಲ ಪಡೆದುಕೊಂಡು ರಾಜಕೀಯವಾಗಿ ಪ್ರಬಲವಾಗಿದೆ. ಕಾರ್ಮಿಕ ಸಂಘಗಳು ರಾಜಕೀಯ ಹಾಗೂ ಆರ್ಥಿಕ ರಂಗದಲ್ಲಿ ಈಗ ಪ್ರಧಾನ ಪಾತ್ರವಹಿಸುತ್ತಿವೆ.

	ಹಣ ಮತ್ತು ಬ್ಯಾಂಕು ವ್ಯವಸ್ಥೆ : ಇಂಗ್ಲೆಂಡಿನಲ್ಲಿ ಹಣ ಮತ್ತು ಬ್ಯಾಂಕು ವ್ಯವಸ್ಥೆ ಬೆಳೆಯದೇ ಹೋಗಿದ್ದಿದ್ದರೆ, ಅಲ್ಲಿನ ಕೈಗಾರಿಕೆ ಹಾಗೂ ವಾಣಿಜ್ಯ ಪ್ರಗತಿ ಅಸಾಧ್ಯವಾಗುತ್ತಿತ್ತು. ಇವೆರಡೂ ಒಂದಕ್ಕೊಂದು ಕೂಡಿ ಮುನ್ನಡೆದುವು. ಒಂದು ಇನ್ನೊಂದಕ್ಕೆ ಪೂರಕವೂ ಪ್ರೇರಕವೂ ಆಯಿತು. ಮಧ್ಯ ಯುಗದಲ್ಲಿ ಬೆಳ್ಳಿಯ ನಾಣ್ಯಗಳೇ ಪ್ರಧಾನವಾಗಿದ್ದುವು. ಚಿನ್ನದ ನಾಣ್ಯಗಳು ಆ ಕಾಲದಲ್ಲಿ ಅಷ್ಟು ಪ್ರಮುಖವಾಗಿರಲಿಲ್ಲ. 1561ರಲ್ಲಿ ಹೊಸನಾಣ್ಯಪದ್ಧತಿಯನ್ನು ಅನುಸರಿಸಲಾಯಿತಾದರೂ ಚಿನ್ನ ಮತ್ತು ಬೆಳ್ಳಿ ನಾಣ್ಯಗಳ ನಡುವೆ ವಿನಿಮಯ ಪ್ರಮಾಣ ನಿಗದಿಮಾಡುವುದು ಕಠಿಣವಾಗಿಯೇ ಉಳಿಯಿತು.

	18ನೆಯ ಶತಮಾನದ ಮುಖ್ಯ ಬದಲಾವಣೆಯೆಂದರೆ ಬೆಳ್ಳಿ ನಾಣ್ಯತ್ವವನ್ನು ಹೋಗಲಾಡಿಸಿ ಅದರ ಸ್ಥಾನದಲ್ಲಿ ಸ್ವರ್ಣಾಧಾರವಾದ ಏಕನಾಣ್ಯ ಪದ್ಧತಿ ಜಾರಿಗೆ ತಂದದ್ದು. 1774ರ ನಾಣ್ಯಪದ್ಧತಿಕಾಯಿದೆ ಜಾರಿಗೆ ಬಂದು ದ್ವಿಲೋಹ ನಾಣ್ಯ ಪದ್ಧತಿಯಿಂದ ಏಕಲೋಹ ನಾಣ್ಯಪದ್ಧತಿಗೆ ಬದಲಾವಣೆಯಾಯಿತು. ಆದರೆ ಬೆಳ್ಳಿ ನಾಣ್ಯ 25 ಪೌಂಡ್ ವರೆಗೆ ವಿಧಿಮಾನ್ಯ ನಾಣ್ಯವಾಗಿ ಮುಂದುವರಿಯಿತು. 1816ರಲ್ಲಿ ಜಾರಿಗೆ ಬಂದ ಕಾನೂನು. ಈ ಮಿತಿಯನ್ನು 2 ಪೌಂಡಿಗೆ ಇಳಿಸಿತು. ಹೀಗಾಗಿ ಬೆಳ್ಳಿಯ ನಾಣ್ಯಗಳು ಕೇವಲ ಪ್ರತೀಕನಾಣ್ಯವಾಗಿ ಮುಂದುವರಿದುವು. 1816ರ ಕಾಯಿದೆ 1821ರಲ್ಲಿ ಜಾರಿಗೆ ಬಂದು. ಇಂಗ್ಲೆಂಡಿನಲ್ಲ್ಲಿ ಸ್ವರ್ಣ ಪ್ರಮಾಣವನ್ನು ಸ್ಥಾಪಿಸಿತು. ಇತರ ಅನೇಕ ರಾಷ್ಟ್ರಗಳು ಸಹ ಈ ಪದ್ಧತಿಯನ್ನನುಸರಿಸಿದ್ದರಿಂದ ಚಿನ್ನದ ಸಾಗುವಿಕೆಯನ್ನು ನಿಯಂತ್ರಿಸುವುದು ಅಗತ್ಯವಿತ್ತು. ಬ್ಯಾಂಕ್ ಆಫ್ ಇಂಗ್ಲೆಂಡಿಗೆ ಈ ಕೆಲಸವನ್ನು ಒಪ್ಪಿಸಲಾಯಿತು. ಅದು ತನ್ನ ಬಡ್ಡಿದರದ ಮೂಲಕ ರಾಷ್ಟ್ರದ ಒಳಕ್ಕೆ ಬರುತ್ತಿದ್ದ ಹಾಗೂ ರಾಷ್ಟ್ರದಿಂದ ಹೊರಕ್ಕೆ ಹೋಗುತ್ತಿದ್ದ ಚಿನ್ನದ ಪ್ರಮಾಣವನ್ನು ನಿಯಂತ್ರಿಸುತ್ತಿತ್ತು. ಸ್ವರ್ಣ ಪ್ರಮಾಣ ಪದ್ಧತಿ ಬಹಳ ಕಾಲದವರೆಗೆ ಸಮರ್ಪಕವಾಗಿ ಮುಂದುವರಿಯಿತು. 17ನೆಯ ಶತಮಾನದ ಅಂತ್ಯದ ಭಾಗದಲ್ಲಿ ಕಾಗದದ ನೋಟುಗಳ ಚಲಾವಣೆ ಆರಂಭವಾಯಿತು.

	ಬ್ಯಾಂಕ್ ಆಫ್ ಇಂಗ್ಲೆಂಡ್ ಸಂಸ್ಥೆ ಬ್ಯಾಂಕ್ ನೋಟುಗಳನ್ನು ಚಲಾವಣೆಗೆ ತಂದಿತು. ಸ್ವರ್ಣ ಪ್ರಮಾಣ ಪದ್ಧತಿ ಬಹಳ ಕಾಲ ನಡೆದುಕೊಂಡು ಬಂತು. 1931ರಲ್ಲಿ ಅದನ್ನು ಕೈಬಿಡಲಾಯಿತು. 

	1844ರಲ್ಲಿ ಜಾರಿಗೆ ಬಂದ ಬ್ಯಾಂಕ್ ಚಾರ್ಟರ್ಸ್ ಕಾಯಿದೆಯಿಂದ ಬ್ಯಾಂಕುಗಳ ನೋಟು ಚಲಾವಣೆಯ ಅಧಿಕಾರಕ್ಕೆ ನಿರ್ಬಂಧವುಂಟಾಯಿತು. ಆದರೆ ಇದರಿಂದ ಕೂಡುಬಂಡವಾಳ ಬ್ಯಾಂಕುಗಳ ಬೆಳವಣಿಗೆಯೇನೂ ಕುಂಠಿತವಾಗಲಿಲ್ಲ. 1844ರ ಕೂಡುಬಂಡವಾಳ ಕಂಪನಿಗಳ ಕಾಯಿದೆ ಪ್ರಕಾರ, ಬ್ಯಾಂಕುಗಳು ಕನಿಷ್ಠ ಪಕ್ಷ ಇಂತಿಷ್ಟು ಬಂಡವಾಳವನ್ನು ಹೊಂದಿರಬೇಕೆಂದೂ ಇಂತಿಷ್ಟು ಪೌಂಡಿಗಿಂತ ಕಡಿಮೆ ಬೆಲೆಯ ಷೇರುಗಳನ್ನು ನೀಡಬಾರದೆಂದೂ ವಿಧಿಸಲಾಯಿತು. ಕೂಡುಬಂಡವಾಳ ಬ್ಯಾಂಕುಗಳು ಪರಸ್ಪರ ಸಂಯೋಗಹೊಂದಿ ದೊಡ್ಡ ಬ್ಯಾಂಕುಗಳಾಗಲಾರಂಭಿಸಿದುವು. ಅಂತಿಮವಾಗಿ 5 ಬೃಹತ್ ಬ್ಯಾಂಕುಗಳು ದೇಶದ ಬ್ಯಾಂಕು ವ್ಯವಹಾರದ ಬಹುಭಾಗವನ್ನು ನಡೆಸಲಾರಂಭಿಸಿದುವು. ಈ ಬ್ಯಾಂಕುಗಳ ಶಾಖೆಗಳೂ ವೇಗವಾಗಿ ಹರಡಲಾರಂಭಿಸಿದುವು. ವಿದೇಶಗಳಲ್ಲೂ ಶಾಖೆಗಳನ್ನು ತೆರೆಯಲಾಯಿತು. ಕೂಡುಬಂಡವಾಳ ಬ್ಯಾಂಕುಗಳಿಗೆ ಎಲ್ಲ ವಿಧದಲ್ಲೂ ಬ್ಯಾಂಕ್ ಆಫ್ ಇಂಗ್ಲೆಂಡ್ ಸಹಾಯಮಾಡುತ್ತಿತ್ತು. 1911ರಲ್ಲಿ ಬ್ಯಾಂಕ್ ಆಫ್ ಇಂಗ್ಲೆಂಡಿನ ಪ್ರತಿನಿಧಿಗಳ ಬ್ಯಾಂಕುಗಳು ಪ್ರತಿನಿಧಿಗೂ ಇತರ ಆರ್ಥಿಕ ಸಂಘಗಳೂ ಮೂರುತಿಂಗಳಿಗೊಮ್ಮೆ ಸಭೆ ನಡೆಸುವ ಕ್ರಮದ ಮೂಲಕ ಪರಸ್ಪರ ಸಹಕಾರ ಬೆಳೆಯಿತು.

	1940ರಲ್ಲಿ ಬ್ರಿಟಿಷ್ ಬ್ಯಾಂಕುಗಳಿಂದ ನೇರವಾಗಿ ಸಾಲಪಡೆದುಕೊಳ್ಳುವುದಕ್ಕೆ ಪ್ರಾರಂಭಿಸಿತು. ಇದು ಬ್ಯಾಂಕುಗಳಿಗೆ ಅಧಿಕಲಾಭ ತರುವ ವ್ಯವಹಾರವಾಯಿತು. 1946ರಲ್ಲಿ ಥ್ರೆಡ್ ನೀಡ್ಸ್ ರಸ್ತೆಯ ವೃದ್ಧ ವನಿತೆಗೆ ಟ್ರಿಷರಿಯ ವೃದ್ಧನೊಡನೆ ಕಾನೂನುಬದ್ಧವಾದ ವಿವಾಹವಾಯಿತು. ಲೇಬರ್ ಪಕ್ಷ ಜಾರಿಗೆ ತಂದ ರಾಷ್ಟ್ರೀಕರಣದ ಕ್ರಮಗಳಲ್ಲಿ ಇದು ಮೊದಲನೆಯ ಹೆಜ್ಜೆಯಾಗಿತ್ತು.		
									(ಸಿ.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ